ಸಾರಾಂಶ
ನಾರಾಯಣ ಹೆಗಡೆ
ಹಾವೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿಯ ಜಿಲ್ಲಾಸ್ಪತ್ರೆಯ ಬಹುತೇಕ ವೈದ್ಯರು ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ. ಇದರಿಂದ ಕಳೆದ ಒಂದು ವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ, ತುರ್ತು ಚಿಕಿತ್ಸೆ ಸೇರಿದಂತೆ ತಜ್ಞ ವೈದ್ಯರಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ.ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ನಿಯೋಜನೆ ಮೇಲಿದ್ದ ಅಧಿಕಾರಿಗಳು, ವೈದ್ಯರು, ನೌಕರರ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆ ಹಿಂಪಡೆದಿದೆ. ಹೀಗೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಜಿಲ್ಲಾಸ್ಪತ್ರೆಯಿಂದ ಸೆಲ್ಫ್ ರಿಲೀವ್ ಆಗಿ ಆರೋಗ್ಯ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದರು.
ಈ ಹಿಂದೆ ಆರೋಗ್ಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಸ್ಪತ್ರೆ ಈಗ ಮೆಡಿಕಲ್ ಕಾಲೇಜು ಶುರುವಾದ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದೆ. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ತಜ್ಞ ವೈದ್ಯರು, ಟೆಕ್ನಿಶಿಯನ್ಸ್, ನರ್ಸಿಂಗ್ ಸಿಬ್ಬಂದಿ ಈಗ ಅನಿವಾರ್ಯವಾಗಿ ಜಾಗ ಖಾಲಿ ಮಾಡುವಂತಾಗಿದೆ. ಮೆಡಿಕಲ್ ಕಾಲೇಜು ಬಂದ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಜಿಲ್ಲಾಸ್ಪತ್ರೆ ಸೇರಿರುವುದರಿಂದ ಈ ಸಮಸ್ಯೆ ಎದುರಾಗಿದೆ.23 ವೈದ್ಯರು ಖಾಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆಯ ಪ್ರಮುಖ ವೈದ್ಯರ ಹುದ್ದೆಗಳೆಲ್ಲ ಖಾಲಿಯಾಗಿವೆ. ಎರಡು ತಿಂಗಳ ಹಿಂದೆ ಇಲಾಖೆಯ ವರ್ಗಾವಣೆ ವೇಳೆ 9 ತಜ್ಞ ವೈದ್ಯರು ಬೇರೆ ಕಡೆ ಹೋಗಿದ್ದರು. ಈಗ ಮತ್ತೆ 14 ವೈದ್ಯರು ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ. ಇದರಿಂದ 23 ತಜ್ಞ ವೈದ್ಯರ ಹುದ್ದೆ ಖಾಲಿಯಾಗಿದೆ. ಪ್ರಮುಖವಾಗಿ ಹೆರಿಗೆ, ಸ್ತ್ರೀರೋಗ ತಜ್ಞರು, ಜನರಲ್ ಮೆಡಿಸಿನ್, ಅನಸ್ತೇಶಿಯಾ, ಮಕ್ಕಳ ತಜ್ಞರು, ಚರ್ಮರೋಗ ವೈದ್ಯರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಹಜ ಹೆರಿಗೆ ಬಿಟ್ಟರೆ ಈಗ ಸಿಜೇರಿಯನ್ ಹೆರಿಗೆ ಮಾಡಲು ವೈದ್ಯರಿಲ್ಲ. ಇದರಿಂದ ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ.
ಪರ್ಯಾಯ ವ್ಯವಸ್ಥೆಯಿಲ್ಲ: ಆರೋಗ್ಯ ಇಲಾಖೆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗಳ ಜಾಗಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯ 19 ವೈದ್ಯರು ಸದ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಈ ಹಿಂದಿನಿಂದ ಕಾರ್ಯ ನಿರ್ವಹಿಸುತ್ತಿದ್ದವರೆಲ್ಲರೂ ಆರೋಗ್ಯ ಇಲಾಖೆಗೆ ಸೇರಿದವರಾಗಿದ್ದು, ಈಗ ಜಿಲ್ಲಾ ಸರ್ಜನ್ ಕೂಡ ಇಲ್ಲಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಇಲ್ಲಿ ತೆರವಾದ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡದ್ದರಿಂದ ರೋಗಿಗಳು ಪರದಾಡುವಂತಾಗಿದೆ.ಎಮರ್ಜೆನ್ಸಿ ಇದ್ದರೆ ಹುಬ್ಬಳ್ಳಿಗೆ ಹೋಗಿಜಿಲ್ಲಾಸ್ಪತ್ರೆಯಲ್ಲಿದ್ದ ತಜ್ಞ ವೈದ್ಯರ ಹುದ್ದೆಗಳು ಖಾಲಿ ಆಗಿರುವುದರಿಂದ ಸದ್ಯ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಹೆರಿಗೆ ನೋವು ತಾಳಲಾರದೇ ಬಂದ ಮಹಿಳೆಯರಿಗೆ ಸಿಜೇರಿಯನ್ ಮಾಡಿಸಲು ವೈದ್ಯರಿಲ್ಲ. ಐವರು ಅನಸ್ತೇಶಿಯಾ ತಜ್ಞರು ಇಲ್ಲಿಂದ ಬಿಡುಗಡೆಯಾಗಿ ಹೋಗಿದ್ದಾರೆ. ತುರ್ತು ಚಿಕಿತ್ಸೆಗೆಂದು ಗ್ರಾಮೀಣ ಭಾಗದಿಂದ ಜಿಲ್ಲಾಸ್ಪತ್ರೆಗೆ ಬಂದರೆ, ಹುಬ್ಬಳ್ಳಿ ಕಿಮ್ಸ್‌ಗೆ ಹೋಗಿ ಎಂದು ರೆಫರೆನ್ಸ್ ಮಾಡಿ ಕಳುಹಿಸುತ್ತಿದ್ದಾರೆ. ಒಪಿಡಿ ಹಾಗೂ ಇನ್ನಿತರ ಸಣ್ಣಪುಟ್ಟ ಕಾಯಿಲೆಗಳಿಗಷ್ಟೇ ಸೀಮಿತವಾಗಿದೆ. ದೂರದ ಹಳ್ಳಿಗಳಿಂದ ಬಂದವರು ವೈದ್ಯರಿಲ್ಲ, ಸಹಕರಿಸಿ ಎಂಬ ಬೋರ್ಡ್ ನೋಡಿ ಹೋಗುವಂತಾಗಿದೆ.
ಬಿಡುಗಡೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶದಂತೆ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ವೈದ್ಯರು ಇದೇ ತಿಂಗಳು ಸ್ವಯಂ ಬಿಡುಗಡೆಯಾಗಿದ್ದಾರೆ. ನರ್ಸಿಂಗ್ ಸಿಬ್ಬಂದಿ ಕೂಡ ಬಿಡುಗಡೆಯಾಗಿ ಹೋಗುವುದಾಗಿ ಹೇಳಿದ್ದಾರೆ. ಖಾಲಿಯಾದ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಆಗದ್ದರಿಂದ ಸಮಸ್ಯೆಯಾಗಿದೆ. ಇರುವ ವೈದ್ಯರು, ಸಿಬ್ಬಂದಿಯಿಂದಲೇ ಸಾಧ್ಯವಾದಷ್ಟು ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ ಎಂದು ಹಾವೇರಿ ಮೆಡಿಕಲ್ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ. ಪ್ರದೀಪಕುಮಾರ್ ಎಂ.ವಿ. ತಿಳಿಸಿದರು.ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ: ವೈದ್ಯರು ಇಲ್ಲದ ಕಾರಣ ಎಮರ್ಜೆನ್ಸಿ, ಒಪಿಡಿ ಹೊರತುಪಡಿಸಿ ಬೇರೆ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿಲ್ಲ. ಇಲಾಖೆ ಆದೇಶದ ಮೇರೆಗೆ ನೌಕರರು ಸ್ವಯಂ ಬಿಡುಗಡೆಯಾಗಿ ಹೋಗಿದ್ದಾರೆ. ಜಿಲ್ಲಾ ಸರ್ಜನ್ ಹುದ್ದೆಯಲ್ಲಿರುವ ನಾನು ಸರ್ಕಾರದ ಸೂಚನೆಯಂತೆ ಮುಂದುವರಿಯುತ್ತೇನೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಪಿ.ಆರ್. ಹಾವನೂರ ತಿಳಿಸಿದರು.