ಸಾರಾಂಶ
ಲೋಕದೊಳಲು ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಕ್ಷೇತ್ರದ ತುಂಬ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಇವುಗಳನ್ನು ನೋಡಿ ಕೆಲವರಿಗೆ ಸಹಿಸಿಕೊಳ್ಳಲೂ ಆಗುತ್ತಿಲ್ಲ. ಅಂತಹ ಜನರು ಏನೇನೂ ಮಾತಾಡುತ್ತಾರೆ. ಅಂತಹವರ ಬಣ್ಣದ ಮಾತುಗಳಿಗೆ ತಲೆ ಕಡಿಸಿಕೊಳ್ಳದೆ ಅಭಿವೃದ್ಧಿ ಪರವಾಗಿ ನಿಂತಿರುವ ಜನರನ್ನು ಬೆಂಬಲಿಸಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಲವರು ಅಧಿಕಾರ ಇದ್ದಾಗ ಕ್ಷೇತ್ರದ ಜನರ ಕಷ್ಟ ಸುಖಗಳ ಕಡೆ ತಲೆ ಹಾಕಲಿಲ್ಲ. ಆದರೆ ನಾನು ಕ್ಷೇತ್ರದ ಮತದಾರರೆಲ್ಲರ ಹಿತ ಕಾಯುವ ಕೆಲಸ ಮಾಡುತ್ತಿದ್ದೇನೆ. ಚುನಾವಣೆಯ ನಂತರ ಕ್ಷೇತ್ರದ ಜನರೆಲ್ಲರೂ ನನ್ನವರೇ ಎಂಬ ಭಾವ ನನಗಿದೆ. ಅದನ್ನು ಅರಿತು ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು.ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ಧಿಯ ಕೆಲಸಗಳು ಮಾದರಿಯಾಗಬೇಕೇ ಹೊರತು ಎದುರಾಳಿಗಳು ಆಡುವ ಬಣ್ಣದ ಮಾತುಗಳಲ್ಲ ಎಂಬುದನ್ನು ಜನರು ಅರಿಯಬೇಕು. ಆ ಜಾಗೃತಿ ಜನರಲ್ಲಿ ಮೂಡಬೇಕು ಎಂದರು.
ಶಾಲಾ-ಕಾಲೇಜು, ಕೆರೆ ಕಟ್ಟೆ, ಚೆಕ್‍ಡ್ಯಾಂ, ಆಸ್ಪತ್ರೆ, ಬಸ್‍ನಿಲ್ದಾಣ ಇವೆಲ್ಲವುಗಳನ್ನು ನನ್ನದೆ ಪ್ಲಾನ್‍ನಿಂದ ಕಟ್ಟಿಸಿದ್ದೇನೆ. ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಇನ್ನೂರಕ್ಕೂ ಹೆಚ್ಚು ಶಾಲೆಗಳು, ಪಿಯು ಕಾಲೇಜು, ಡಿಗ್ರಿ ಕಾಲೇಜುಗಳನ್ನು ತೆರೆಯಲಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅದುವೇ ನಿಜವಾದ ಆಸ್ತಿ ಪೋಷಕರುಗಳು ಮಕ್ಕಳ ಭವಿಷ್ಯದ ಕಡೆ ಗಮನ ಕೊಡಬೇಕೆಂದು ಹೇಳಿದರು. ಹೆಣ್ಣು ಮಕ್ಕಳಿಗೆ, ಗಂಡು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್‍ಗಳನ್ನು ಕಟ್ಟಿಸಿದ್ದೇನೆ. ರಾಜಕಾರಣಿಯಾದವನಿಗೆ ಮತ್ಸರವಿರಬಾರದು. ಪರೋಪಕಾರದ ಗುಣವಿದ್ದರೆ ದೇವರು ಒಳ್ಳೆಯದು ಮಾಡುತ್ತಾನೆ. ನುಡಿದಂತೆ ನಡೆಯುವುದು ಮನುಷ್ಯನ ಧರ್ಮ. ಮುಂದಿನ ದಿನಗಳಲ್ಲಿ ಕೆರೆ ತುಂಬಿಸಿ ದೇವಸ್ಥಾನವನ್ನು ಕಟ್ಟಿಸುತ್ತೇನೆಂದರು.ಗ್ರಾಪಂ ಸದಸ್ಯರಾದ ತಿಮ್ಮೇಶ್, ಮೀನಮ್ಮ, ಚಂದ್ರಶೇಖರ್, ಗವಿರಂಗಪ್ಪ, ಪುಟ್ಟರಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ರಂಗಸ್ವಾಮಿ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.