ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವವ ಮೇಲೆ ವಕೀಲನೊಬ್ಬ ಶೂ ಎಸೆದ ಪ್ರಕರಣವನ್ನು ಖಂಡಿಸಿ ದಲಿತ ಪ್ರಗತಿಪರ ವೇದಿಕೆಯು ನಗರದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಗೂ ಮುನ್ನಾ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ದಲಿತಪರ ಸಂಘಟನೆಗಳು, ಪ್ರಗತಿಪರ ವೇದಿಕೆಯ ಮುಖಂಡರು ನಗರದ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಸೇರಿ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ತಾಲೂಕು ಆಡಳಿತದ ಕಚೇರಿಯವರೆಗೂ ಕಾಲ್ನಡಿಗೆ ಮೂಲಕ ಆಗಮಿಸಿ ತಹಸೀಲ್ದಾರ್ ಎಂ.ವಿ.ರೂಪ ರವರಿಗೆ ಮನವಿ ಸಲ್ಲಿಸಿದರು.ಮನುವಾದಿಗಳ ಕೈವಾಡಈ ಸಂದರ್ಭದಲ್ಲಿ ದಲಿತ ಸಿಂಹ ಸೇನೆಯ ಕರ್ನಾಟಕ. ಸಂಸ್ಥಾಪಕ ಅಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್ ಮಾತನಾಡಿ, ಇದು ವಕೀಲ ರಾಕೇಶ್ ಕಿಶೋರ್ ಮಾಡಿದ ಕೆಲಸವಲ್ಲ. ಇದರ ಹಿಂದೆ ಸಂಘ ಪರಿವಾರ ಇದೆ. ಮನುವಾದಿಗಳಿದ್ದಾರೆ. ಪಟ್ಟಭದ್ರಹಿತಸಕ್ತಿಗಳಿದ್ದಾರೆ. ದೇಶದ್ರೊಹಿಗಳಿದ್ದಾರೆ ಅವರೆಲ್ಲ ಸೇರಿ ಮಾಡಿರುವ ಘಟನೆ ಇದಾಗಿದೆ ಎ₹ದು ಆರೋಪಿಸಿದರು.
ಇದರಿಂದಾಗಿ ರಾಕೇಶ್ ಕಿಶೋರ್‌ನ ಕೃತ್ಯ ಈ ದೇಶದ ಜನತೆಗೆ ಗೊತ್ತಾಗಿದೆ. ಇದರ ಕೈವಾಡ ಯಾರಿದ್ದಾರೆ, ಯಾರಿಂದ ಆಗಿದೆ ಅಂತ ದೇಶದ ಜನತೆಗೆ ಗೊತ್ತಾಗಿದೆ, ಮುಂದಿನ ದಿನಗಳಲ್ಲಿ ನಿಮಗೆ ಜನ ಪಾಠ ಕಲಿಸುತ್ತಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಅವರತ್ತ ವಕೀಲ ರಾಕೇಶ್ ಕಿಶೋರ್ ಒಂದು ಶೂ ಎಸೆದಿರಬಹುದು. ಅದರೆ ಗವಾಯಿ ಅವರ ಪರವಾಗಿ, ನ್ಯಾಯದ ಪರವಾಗಿ, ಸಂವಿಧಾನದ ಪರವಾಗಿ, ದೇಶದ ಪರವಾಗಿ ಕೋಟ್ಯಂತರ ಜನರಿದ್ದಾರೆ. ಅವರೆಲ್ಲರೂ ನಿಮ್ಮ ಮೇಲೆ ಬಿದ್ದರೆ ನಿವು ಏನಾಗುತ್ತೀರಿ ಎಂಬ ಎಚ್ಚರಿಕೆ ಇರಲಿ ಎಂದರು. ಆರೋಪಿಯನ್ನು ಗಲ್ಲಿಗೇರಿಸಿದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಎಟ್ಟಕೋಡಿ ವೆಂಕಟೇಶ್ ಮಾತನಾಡಿ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಅವರತ್ತ ಶೂ ಎಸೆದ ಕಿಡಿಗೇಡಿ ವಕೀಲನನ್ನು ತಕ್ಷಣವೇ ಕೇಂದ್ರ ಸರ್ಕಾರವು ಗಡಿಪಾರು ಮಾಡಬೇಕು ಇಲ್ಲವಾದರೆ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಎಂ.ವಿ.ರೂಪ ರವರ ಮೂಲಕ ರಾಷ್ಟ್ರಪತಿಗಳಿಗೆ, ಕೇಂದ್ರ ಸರ್ಕಾರದ ಗೃಹ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿ.ಎನ್.ಎಸ್. ರಾಜ್ಯಾಧ್ಯಕ್ಷ ಕೋಡೂರು ಗೋಪಾಲ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್, ಎಟ್ಟಕೋಡಿ ಸಂತೋಷ್, ಆಟೋ ಶ್ರೀನಿವಾಸ್, ಚನ್ನಕಲ್ ಸಂತೋಷ್, ಮುಳಬಾಗಿಲಪ್ಪ, ಮುನಿನಾರಾಯಣ, ದ್ಯಾಪಸಂದ್ರ ವೆಂಕಟೇಶ್, ಸೀತಾನಾಯಕನಹಳ್ಳಿ ಕುಟ್ಟಿ, ಮುನಿರಾಜು, ವೆಂಕಟೇಶ್ ಕಾಳಿ, ಮಡಿವಾಳ ಶ್ರೀನಿವಾಸ್, ಆಣಿಕರಹಳ್ಳಿ ಕೃಷ್ಣಪ್ಪ, ರಾಘವೇಂದ್ರ, ಬಾಲು, ಸರ್ದಾರ್, ರಾಜಪ್ಪ, ಸಿ.ಟಿ.ಕಿರಣ್, ಶಶಿಕುಮಾರ್,ಜಬ್ಬೀ, ಗುಡ್ನಹಳ್ಳಿ ನಂದೀಶ್ ಇನ್ನಿತರರು ಹಾಜರಿದ್ದರು.