ಗುರುಗಳ ಮಾತನ್ನು ಅಲ್ಲಗೆಳೆಯದಿರಿ: ಡಾ.ಹರ್ಷಿತ್ ಗೌಡ ಕಿವಿಮಾತು

| Published : Dec 28 2024, 01:00 AM IST

ಸಾರಾಂಶ

ಗೋಣಿಕೊಪ್ಪದ ಕ್ಯಾಲ್ಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡೋತ್ಸವ ನಡೆಯಿತು. ಮುಖ್ಯ ಅತಿಥಿಯಾಗಿ ವೈದ್ಯ ಡಾ.ಹರ್ಷಿತ್ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಗುರುಗಳ ಮಾತನ್ನು ಯಾವ ವಿದ್ಯಾರ್ಥಿಯೂ ಅಲ್ಲಗೆಳೆಯಬಾರದು, ಅಂದಿನ ಪಾಠ ಪ್ರವಚನಗಳನ್ನು ಅಂದೇ ಅಭ್ಯಾಸ ಮಾಡಬೇಕು. ಹೆತ್ತವರ ಮನಸ್ಸನ್ನು ನೋಯಿಸದೆ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿದ್ದಲ್ಲಿ ಸಾಧನೆ ಶಿಖರವನ್ನು ತಲುಪಬಹುದು ಎಂದು ವೈದ್ಯ ಡಾ.ಹರ್ಷಿತ್ ಹೇಳಿದರು.ಗೋಣಿಕೊಪ್ಪದ ಕ್ಯಾಲ್ಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಮಾಜದಲ್ಲಿ ಉತ್ತಮ ಸಾಧನೆ ಮಾಡಲು ಅತ್ಯಂತ ಕಠಿಣ ಪರಿಶ್ರಮ ಅತ್ಯಗತ್ಯ. ಇದನ್ನು ಕ್ಯಾಲ್ಸ್ ವಿದ್ಯಾಸಂಸ್ಥೆ ಕಲಿಸಿ ಕೊಡುತ್ತಿದೆ ಎಂದರು.

ಗುರುಗಳು ಅಂದು ಹೇಳಿಕೊಟ್ಟ ಪಾಠವು ಇಂದು ನಾನು ಜೀವನದಲ್ಲಿ ಅಳವಡಿಸಿಕೊಂಡ ಪರಿಣಾಮ ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಅನುಕೂಲವಾಯಿತು. ಪ್ರತಿ ವಿದ್ಯಾರ್ಥಿಯಲ್ಲಿ ತನ್ನದೇ ಆದ ಪ್ರತಿಭೆ ಅಡಕವಾಗಿರುತ್ತದೆ. ಅಂತಹ ಪ್ರತಿಭೆಯನ್ನು ಗುರುತಿಸಿಸುವ ಕೆಲಸ ಈ ವಿದ್ಯಾಸಂಸ್ಥೆ ನಡೆಸುತ್ತಾ ಬಂದಿದೆ. ಇದರಿಂದ ಸಂಸ್ಥೆ ಬೆಳೆಯುವುದರೊಂದಿಗೆ ತಮ್ಮ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕ್ಯಾಲ್ಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಗೌರಮ್ಮ ಮಾತನಾಡಿ, ಶಿಕ್ಷಕರ ಕಠಿಣ ಶ್ರಮದ ಫಲವಾಗಿ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಅವಕಾಶವಾಗಿದೆ. ವಿದ್ಯಾಸಂಸ್ಥೆಯಲ್ಲಿ ನುರಿತ ಅಧ್ಯಾಪಕರ ವರ್ಗ ಹಾಗೂ ಉತ್ತಮ ದೈಹಿಕ ಶಿಕ್ಷಕರ ಪರಿಶ್ರಮದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಅವಕಾಶವಾಗಿದೆ ಎಂದು ತಿಳಿಸಿದರು.

ಕ್ರೀಡೋತ್ಸವ ಅಂಗವಾಗಿ ವೇದಿಕೆಯಲ್ಲಿ ಪ್ರಮುಖರಾದ ರಾಜ ಸುಬ್ಬಯ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸ್ಸನ್ನು ಗೆದ್ದಿತು.

ಹಲವು ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಹರ್ಷಿತ್ ಗೌಡ ಅವರನ್ನು ಕೊಡಗಿನ ಸಾಂಪ್ರದಾಯಿಕ ಕೊಡುಗೆ ನೀಡಿ ಗೌರವಿಸಲಾಯಿತು.ಶಿಕ್ಷಕರಾದ ರಶ್ಮಿ ಉತ್ತಪ್ಪ, ಸ್ವರೂಪ್ ಪೊನ್ನಪ್ಪ ನಿರೂಪಿಸಿದರು. ಬಿ.ಜಿ.ಬಿಂದ್ಯಾ ಸ್ವಾಗತಿಸಿದರು. ಎಂ.ಟಿ.ರಶ್ಮಿ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.