ಡಾ.ಅಂಬೇಡ್ಕರ್‌ಗೆ ಕಾಂಗ್ರೆಸ್‌ ಎಂದೂ ಒಳ್ಳೆಯದು ಬಯಸಿಲ್ಲ: ಸಂಸದ ಪಿ.ಸಿ.ಗದ್ದಿಗೌಡರ

| Published : Dec 28 2024, 01:00 AM IST

ಡಾ.ಅಂಬೇಡ್ಕರ್‌ಗೆ ಕಾಂಗ್ರೆಸ್‌ ಎಂದೂ ಒಳ್ಳೆಯದು ಬಯಸಿಲ್ಲ: ಸಂಸದ ಪಿ.ಸಿ.ಗದ್ದಿಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಹಿಂದಿನಿಂದಲೂ ಡಾ.ಅಂಬೇಡ್ಕರ್‌ಗೆ ಒಳ್ಳೆಯದನ್ನು ಬಯಸಿಲ್ಲ. ಅವರನ್ನು ಬೆಂಬಲಿಸಿಲ್ಲ ಎಂಬುದು ಇತಿಹಾಸದಿಂದ ತಿಳಿಯುತ್ತದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್‌ ಹುನ್ನಾರ ನಡೆಸಿದ್ದು ಗೃಹ ಸಚಿವ ಅಮಿತ್‌ ಶಾ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಶಾ ಅವರ ಪೂರ್ಣ ವಿಡಿಯೋ ಕೇಳಿದರೆ ಅವರ ಉದ್ದೇಶ ತಮಗೆ ಗೊತ್ತಾಗುತ್ತದೆ. ಜನರಿಗೆ ತಪ್ಪು ಮಾಹಿತಿ ನೀಡಿ ಕಾಂಗ್ರೆಸ್‌ ಗೊಂದಲ ಸೃಷ್ಟಿಸುತ್ತಿದೆ ಎಂದು ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಆರೋಪಿಸಿದರು.

ಮಹಬಳಶೆಟ್ಟಿಯವರು ನೂತನವಾಗಿ ನಿರ್ಮಿಸಿದ ಟರ್ಫ್ ಮೈದಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹಿಂದಿನಿಂದಲೂ ಡಾ.ಅಂಬೇಡ್ಕರ್‌ಗೆ ಒಳ್ಳೆಯದನ್ನು ಬಯಸಿಲ್ಲ. ಅವರನ್ನು ಬೆಂಬಲಿಸಿಲ್ಲ ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಆದರೆ ಈಗ ಮಾತ್ರ ಅವರ ಹೆಸರು ಹೇಳಿಕೊಂಡು ರಾಜಕೀಯ ಮಾಡಲು ಮುಂದಾಗಿದೆ. ಬಿಜೆಪಿ ದೂಷಿಸುವ ಭರದಲ್ಲಿ ತನ್ನ ಕರ್ತವ್ಯ ಮರೆತಿದೆ. ಬಲಿಷ್ಟ ವಿರೋಧ ಪಕ್ಷವಾಗಿ ದೇಶದ ಅಭಿವೃದ್ಧಿ ಕೆಲಸ ಮಾಡ ಬೇಕಿದ್ದ ಕಾಂಗ್ರೆಸ್‌ ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿದರು.

ವಿಧಾನ ಪರಿಷತ್‌ನಲ್ಲಿ ಸಿ.ಟಿ.ರವಿ ಮಾತನಾಡಿದ್ದರ ಬಗ್ಗೆ ಸಭಾಪತಿಗಳು ಈಗಾಗಲೇ ಸ್ಪಷ್ಟ ಸಂದೇಶ ನೀಡಿದ್ದಾರೆ. ಕಾಂಗ್ರೆಸ್‌ಗೆ ಅದು ಬೇಕಿಲ್ಲ. ಸಂವಿಧಾನ ಬಾಹಿರವಾಗಿ ಸದನದೊಳಗೆ ಪೊಲೀಸರನ್ನು ಕರೆಯಿಸಿ ರಾದ್ಧಾಂತ ಮಾಡಲಾಗಿದೆ. ಪೊಲೀಸರನ್ನು ಬಳಸಿಕೊಂಡು ಮನ ಬಂದಂತೆ ಕಾಂಗ್ರೆಸ್‌ ನಡೆದುಕೊಂಡಿರುವುದು ಘೋರ ಅಪರಾಧ ಎಂದು ಗದ್ದಿಗೌಡರ ಅಭಿಪ್ರಾಯಪಟ್ಟರು.

ಕೃಷ್ಣಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಬರುವುದಿಲ್ಲ. ಅದರ ಬದಲು ಹೆಚ್ಚು ಅನುದಾನವನ್ನು ಕೇಂದ್ರ ಸರ್ಕಾರ ನೀಡಬಹುದು. ರಾಜ್ಯ ಸರ್ಕಾರವೇ ಯುಕೆಪಿ ಯೋಜನೆ ಕೈಗೆತ್ತಿಕೊಳ್ಳಬೇಕೆಂದರು. ರಾಜ್ಯಸರ್ಕಾರದಲ್ಲಿ ಹಣವಿಲ್ಲ. ಆದ್ದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಜನರ ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಕಸರತ್ತು ನಡೆಸುತ್ತಿದೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಭರದಿಂದ ನಡೆಯುತ್ತಿದೆ. ಶೀಘ್ರದಲ್ಲಿ ಮುಕ್ತಾಯವಾಗಲಿದ್ದು ತಮ್ಮ ಅಧಿಕಾರ ಅವಧಿಯಲ್ಲಿ ಉದ್ಘಾಟನೆಯು ನಡೆಯಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಶಾಸಕ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸೌದಿ, ಮುಖಂಡರಾದ ಮಾಜಿ ವಿಧಾನ ಪರಿಷತ್‌ ಸದಸ್ಯ ಜಿ.ಎಸ್‌.ನ್ಯಾಮಗೌಡ, ಸಂಗಮೇಶ ನಿರಾಣಿ, ಡಾ.ವಿಜಯಲಕ್ಷ್ಮೀತುಂಗಳ, ಮುಂತಾದವರಿದ್ದರು.