ಕನ್ನಡಪ್ರಭವಾರ್ತೆ ಸಿದ್ದಾಪುರ

ಕಾಡಾನೆ ದಾಳಿಗೆ ಕಾರೊಂದು ಜಖಂಗೊಂಡಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಕೆಸನಳ್ಳ ತೋಟದ ಸಮೀಪ ನಡೆದಿದೆ.

ಅಮ್ಮತ್ತಿ ಪುಲಿಯೇರಿ ಗ್ರಾಮದ ನಿವಾಸಿ‌ ಪ್ರಜಿತ್‌ ಎಂಬವವರು ಮೈಸೂರು ರಸ್ತೆಯಿಂದ ಬುಧವಾರ ರಾತ್ರಿ ತಮ್ಮ ಮಾರುತಿ ಡಿಸೈರ್ ಕಾರಿನಲ್ಲಿ ಸಿದ್ದಾಪುರಕ್ಕೆ ಬರುತಿರುವ ಸಂದರ್ಭ ಕೆಸನಳ್ಳ ತೋಟದ ಸಮೀಪದ ಮುಖ್ಯ ರಸ್ತೆಯಲ್ಲಿ ಕಾಡಾನೆ ಹಿಂಡು ಕಾರಿನ ಮೇಲೆ ದಾಳಿ ನಡೆಸಿ ಕಾರಿಗೆ ಕಾಲಿನಿಂದ ತುಳಿದು ದಂತದಿಂದ ತಿವಿದು ಕಾರನ್ನು ಜಖಂಗೊಳಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಜಿತ್ ಯಾವುದೇ ಹಾನಿಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಭಯಭೀತರಾಗಿರುವ ಗ್ರಾಮಸ್ಥರು ಕಾಡಾನೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿದ್ದಾರೆ.