ದಾಳಿ ಮಾಡಿದ ಗಂಡಾನೆ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಳೆದ ಐದು ದಿನಗಳ ಹಿಂದೆ ಹುಣಸೇಹಳ್ಳಿ ಸಮೀಪದ ಹ್ಯಾರಂಬಿ ಪುರ ಗ್ರಾಮದಲ್ಲಿ ಕಾರ್ಮಿಕನೊಬ್ಬನನ್ನು ತುಳಿದು ಸಾಯಿಸಿದ ಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಗುರುವಾರ ಅಧಿಕೃತ ಕಾರ್ಯಾಚರಣೆ ಆರಂಭಗೊಡಿದೆ.ಈ ಗ್ರಾಮದಲ್ಲಿ ಒಟ್ಟು ಮೂರು ಆನೆಗಳಿದ್ದು, ಇವುಗಳಲ್ಲಿ ದಾಳಿ ಮಾಡಿದ ಒಂದು ಗಂಡಾನೆಯನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಸೂಚಿಸಲಾಗಿದೆ.ಇನ್ನುಳಿದ ಎರಡು ಆನೆಗಳಲ್ಲಿ ಒಂದು ಆನೆಗೆ ರೇಡಿಯೋ ಕಾಲರ್ ಅಳವಡಿಸಿ ಇವುಗಳ ಚಲನವಲನಗಳ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ.

ಕಾರ್ಮಿಕನನ್ನು ಕಾಡಾನೆ ತುಳಿದು ಸಾಯಿಸಿದ ಬಳಿಕ ಸ್ಥಳೀಯರು ಬಾಳೆಹೊನ್ನೂರು ಅರಣ್ಯ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಕಾಡಾನೆ ಸೆರೆಗೆ ಅನುಮತಿ ದೊರೆತಿತ್ತು. ಆನೆ ಸೆರೆಗೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಬಿಡಾರದಿಂದ ಒಟ್ಟು 7 ಆನೆಗಳನ್ನು ಕರೆತರಲಾಗಿದೆ. ಪುರ ಗ್ರಾಮದಲ್ಲಿ ಅವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬರಮಾಡಿಕೊಂಡು ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆಗೆ ಗುರುವಾರ ಚಾಲನೆ ನೀಡಿದರು.

ತಂಡದಲ್ಲಿ ಸಾಗರ್, ಜ್ಯೂನಿಯರ್ ಅರ್ಜುನ, ಭೀಮ, ಶ್ರೀಕಂಠ, ಮಹೇಂದ್ರ, ಭೀಷ್ಮ ಎಂಬ ಆನೆಗಳಿದ್ದು, ಎಲ್ಲಾ ಏಳು ಕುಮ್ಕಿ ಆನೆಗಳು ಮಾವುತರೊಂದಿಗೆ ಕಾರ್ಯಾಚರಣೆಗೆ ಇಳಿದಿವೆ. ಅರಣ್ಯ ಇಲಾಖೆ 50 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸುಮಾರು 4 ತಂಡಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ತಜ್ಞ ವೈದ್ಯರಾದ ಡಾ.ರಮೇಶ್, ಡಾ.ರಂಜನ್ ಶಾರ್ಪ್ ಶೂಟರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಗುರುವಾರ ಕಾರ್ಯಾಚರಣೆ ಆರಂಭಗೊಂಡ ಬಳಿಕ ಒಂಟಿ ದಂತ ಹೊಂದಿರುವ ಒಂದು ಕಾಡಾನೆ ಮಾತ್ರ ತಂಡಕ್ಕೆ ಕಾಣಿಸಿ ಕೊಂಡಿದ್ದು, ಇನ್ನೆರಡು ಆನೆಗಳು ಸಂಜೆವರೆಗೂ ಕಾಣಿಸಿಲ್ಲ. ಆದರೂ ಸಹ ಕೂಬಿಂಗ್ ಮುಂದುವರಿದಿದೆ ಎಂದು ಬಾಳೆಹೊನ್ನೂರು ಎಸಿಎಫ್ ಮೋಹನ್‌ಕುಮಾರ್ ತಿಳಿಸಿದ್ದಾರೆ. ೧೯ಬಿಹೆಚ್‌ಆರ್ ೪:


ಬಾಳೆಹೊನ್ನೂರು ಸಮೀಪದ ಹ್ಯಾರಂಬಿ ಪುರ ಗ್ರಾಮದಲ್ಲಿ ಹಂತಕ ಕಾಡಾನೆ ಸೆರೆ ಕಾರ್ಯಾಚರಣೆಗೆ ಸಕ್ರೆಬೈಲು ಆನೆ ಬಿಡಾರದಿಂದ ಬಂದಿರುವ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.