ಮೀಸಲಾತಿ ಸಿಗೋವರೆಗೂ ಮಠಕ್ಕೆ ಹೋಗಲ್ಲ: ಬಸವಜಯ ಮೃತ್ಯುಂಜಯಶ್ರೀ

| Published : Dec 01 2024, 01:30 AM IST

ಸಾರಾಂಶ

ಮೀಸಲಾತಿ ಹೋರಾಟ ಜಯ ದೊರಕುವವರೆಗೂ ಮಠಕ್ಕೆ ಬರಲ್ಲವೆಂದು ಹೇಳಿದ್ದೇನೆ. ಹೀಗಾಗಿ ಮಠಕ್ಕೆ ಹೋಗುವುದೇ ಇಲ್ಲ. ಇದರ ಬಗ್ಗೆ ದ್ವಂದ್ವ ನಿಲುವಿಲ್ಲ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮೀಸಲಾತಿ ಹೋರಾಟ ಜಯ ದೊರಕುವವರೆಗೂ ಮಠಕ್ಕೆ ಬರಲ್ಲವೆಂದು ಹೇಳಿದ್ದೇನೆ. ಹೀಗಾಗಿ ಮಠಕ್ಕೆ ಹೋಗುವುದೇ ಇಲ್ಲ. ಇದರ ಬಗ್ಗೆ ದ್ವಂದ್ವ ನಿಲುವಿಲ್ಲ. ಇದೀಗ ಆಡಳಿತ ಪಕ್ಷದ ಶಾಸಕರಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರೂ ಸಹಿತ ಮನೆಗೆ ತೆರಳಲ್ಲವೆಂದು ಹೇಳಿದ್ದರು. ನಾವೇ ಸ್ವತಃ ಚುನಾವಣೆ ಹಾಗೂ ಸ್ಪರ್ಧೆಯ ಕಾರಣಕ್ಕೆ ಅವರನ್ನು ಮನೆಗೆ ತಲುಪಿಸಿ ಬಂದಿದ್ದೇವೆ. ಮತ್ತೇಕೆ ಪ್ರಶ್ನೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

ಬನಹಟ್ಟಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆಯುವ ಪಂಚಮಸಾಲಿ ಸಭೆಯಲ್ಲಿ ಯತ್ನಾಳ ಹಾಗೂ ಶ್ರೀಗಳಿಗೆ ಆಹ್ವಾನಿಸಲ್ಲವೆಂಬ ಕಾಶಪ್ಪನವರ ಹೇಳಿಕೆಗೆ ತಿರುಗೇಟು ನೀಡಿದರು. ನಮ್ಮನ್ನು ಬಿಟ್ಟು ಮಾಡಿದರೆ ತಪ್ಪೇನಿಲ್ಲ. ಯಾರನ್ನು ಕರೆದುಕೊಂಡು ಮಾಡಿದರೂ ಸಮಾಜದ ಮೀಸಲಾತಿಗಾಗಿಯೇ ಹೊರತು ಯಾವುದೇ ದುರುದ್ದೇಶವಿರಲ್ಲ. ಮೂರುವರೆ ವರ್ಷಗಳಿಂದ ನಡೆಸಿದ ಹೋರಾಟ ಕಳೆದ ಒಂದು ವರ್ಷದ ಕಾಲಾವಧಿಯಲ್ಲಿ ವ್ಯರ್ಥವಾಗಬಾರದೆಂದು ಪುನಃ ತಾವು ಹೋರಾಟದ ನೇತೃತ್ವ ವಹಿಸಿದ್ದಾಗಿ ಶ್ರೀಗಳು ಸ್ಪಷ್ಟಪಡಿಸಿದರು.

ಆಗ ಬಿಜೆಪಿ ಸರ್ಕಾರವಿದ್ದಾಗಲೂ ಹೋರಾಟವಿತ್ತು. ಈಗ ಕಾಂಗ್ರೆಸ್ ಸರ್ಕಾರದ್ದಾಗಿದೆ. ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತ ಹೋರಾಟವಾಗಿ ಬೆಂಬಲ ಸೂಚಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲರ ರೀತಿ ಎಲ್ಲ ಸಚಿವರು, ಶಾಸಕರು ಕೆಲಸ ಮಾಡಲು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಹೆದರಿಕೆಯಿಲ್ಲ:

ಕೆಲ ರಾಜಕಾರಣಿಗಳಿಂದ ಹೆದರಿಕೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಹೇಳಿಕೆಗಳಿಂದ ಏನಾದರೂ ಆಗಬಹುದು. ಸಮಾಜದ ಕೆಲ ಪ್ರಮುಖರಿಗೆ ಹೋರಾಟದಲ್ಲಿ ಭಾಗಿಯಾಗದಂತೆ ಒತ್ತಡವಿದೆ. ನನಗೂ ಕೆಲ ಕರೆಗಳು ಬಂದಿವೆ. ಆದರೆ ಯಾವುದೇ ರೀತಿ ಹೆದರುವ ಮಾತಿಲ್ಲ. ಹೋರಾಟದ ಬಗ್ಗೆ ಮುಂದಿಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.2ಎ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿರುವುದರಿಂದ ಪಂಚಮಸಾಲಿ ಸಮಾಜದ ಮುಖಂಡರಿಗೆ ಕರೆ ಮಾಡಿ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.