ಸಾರಾಂಶ
ಮಕ್ಕಳು ಜೀವನದಲ್ಲಿ ಗುರಿ ಇಟ್ಟುಕೊಂಡು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯಬೇಕು. ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳ ಶಿಕ್ಷಣ ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಲಹೆ ನೀಡಿದರು.
ಬೆಂಗಳೂರು : ಮಕ್ಕಳು ಜೀವನದಲ್ಲಿ ಗುರಿ ಇಟ್ಟುಕೊಂಡು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯಬೇಕು. ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳ ಶಿಕ್ಷಣ ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಲಹೆ ನೀಡಿದರು.
ಶುಕ್ರವಾರ ಕಬ್ಬನ್ ಉದ್ಯಾನದಲ್ಲಿರುವ ಜವಾಹರ ಬಾಲ ಭವನದಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಧೈರ್ಯ, ಸಾಹಸ ಮತ್ತು ಸಮಯ ಪ್ರಜ್ಞೆಯಿಂದ ಇತರರ ಪ್ರಾಣವನ್ನು ಅಪಾಯದಿಂದ ರಕ್ಷಿಸಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಮುದ್ರಿತ ಪಠ್ಯ ಪುಸ್ತಕ, ನೋಟ್ ಬುಕ್‌ಗಳಾಚೆಗೆ ಶಿಕ್ಷಣವಿದೆ. ಪ್ರಸ್ತುತ ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಶಿಕ್ಷಣವನ್ನು ಮತ್ತಷ್ಟು ಸುಂದರಗೊಳಿಸಬಹುದು ಎಂಬುದನ್ನು ಅರಿತುಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಬಳಕೆಯಿಂದ ಸಂವಹನ ಕಲೆ, ಆಡಳಿತಾತ್ಮಕ ಕೌಶಲ್ಯ, ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಮಕ್ಕಳಿಗೆ ಸಹಕಾರಿಯಾಗುತ್ತದೆ. ನಿರಂತರ ಪರಿಶ್ರಮ, ದೃಢ ನಿರ್ಧಾರ, ಅಚಲ ವಿಶ್ವಾಸದಿಂದ ತಂದೆ-ತಾಯಂದಿರ ಆದರ್ಶ ಮಕ್ಕಳಾಗಿ ಬೆಳೆಯಬೇಕೆಂದು ತಿಳಿಸಿದರು.
ಮಾತೃಲಕ್ಷ್ಮಿ ಬಿಡುಗಡೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ವತಿಯಿಂದ ಹೊರತಂದ ಇಲಾಖೆಯ ಯೋಜನೆಯ ಮತ್ತು ಕಾರ್ಯಕ್ರಮಗಳ ಮಾಹಿತಿ ಕೈಪಿಡಿ-2024 ‘ಮಾತೃಲಕ್ಷ್ಮಿʼಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದರು. ಇದೇ ವೇಳೆ ಬೆಂಗಳೂರು ನಗರ ಜಿಲ್ಲೆ ಉತ್ತರಹಳ್ಳಿಯ ವಿ. ಆರುಣಿ ಅವರಿಗೆ ವಿಶೇಷ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ:
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಾಣಿಗೆರೆ ಗ್ರಾಮದ ಸಂತ ಗ್ರಿಗೋರಿಯಸ್ ದಯಾ ಭವನ, ಧಾರವಾಡದ ಶಾರದ ಕಾಲೋನಿಯಲ್ಲಿರುವ ಹೊಂಬೆಳಕು ಪ್ರತಿಷ್ಠಾನ, ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳಿ ಹಾಗೂ ಕೋಲಾರ ಜಯನಗರದ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘವು ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳ ರಾಜ್ಯ ಪ್ರಶಸ್ತಿಗೆ ಭಾಜನವಾಗಿವೆ.
ವ್ಯಕ್ತಿಗಳ ವಿಭಾಗದ ರಾಜ್ಯ ಪ್ರಶಸ್ತಿ:
ಶಿವಮೊಗ್ಗ ಜಿಲ್ಲೆಯ ಆಲ್ಕೋಳದ ನಂದಿನಿ ಬಡಾವಣೆಯ ಎಚ್.ಪಿ.ಸುದರ್ಶನ್, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕು ಹಳಿಯಾಳ ರಸ್ತೆಯ ಸುನೀಲ ಮ. ಕಮ್ಮಾರ್, ಬೀದರ್ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ಕೊಡಂನಲ್‌ನ ಸಂಗಮೇಶ್ ಹಾಗೂ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಶಿರೂರಿನ ಗವಿಸಿದ್ದಯ್ಯ ಜ. ಹಳ್ಳಿಕೇರಿ ಮಠ ಅವರು ವ್ಯಕ್ತಿಗಳ ವಿಭಾಗದ ರಾಜ್ಯ ಪ್ರಶಸ್ತಿಗೆ ಅರ್ಹರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಎನ್.ಎಚ್.ಕೋನರೆಡ್ಡಿ, ಉದಯ್ ಬಿ.ಗರುಡಾಚಾರ್, ಕೊತ್ತನೂರು ಮಂಜುನಾಥ್, ಮಂಜುಳಾ ಲಿಂಬಾವಳಿ, ಸಂಸದ ಸಿ.ಎನ್.ಮಂಜುನಾಥ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇ ಬಬಲೇಶ್ವರ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಕರಕುಶಲ ಕೈಗಾರಿಕೆ ಅಭಿವೃದ್ಧಿ ಅಧ್ಯಕ್ಷೆ ಎಂ.ರೂಪಕಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೊಯ್ಸಳ ಪ್ರಶಸ್ತಿ ವಿಜೇತ ಮಕ್ಕಳು
* 2ನೇ ತರಗತಿ ವಿದ್ಯಾರ್ಥಿ ಶಿವಮೊಗ್ಗದ ಹೊಸನಗರ ತಾಲೂಕಿನ ಆರ್.ಮಣಿಕಂಠ ಸಹಪಾಠಿಯ ಬ್ಯಾಗ್‌ನಲ್ಲಿ ಹಾವು ಇರುವುದನ್ನು ಗಮನಿಸಿ ಭಯಭೀತರಾಗದೇ ಸಮಯಪ್ರಜ್ಞೆಯಿಂದ ಬ್ಯಾಗ್ ಜಿಪ್ಪನ್ನು ಹಾಕಿ ಆಟದ ಮೈದಾನದಲ್ಲಿ ತಂದಿಟ್ಟು ಧೈರ್ಯ ಪ್ರದರ್ಶಿಸಿದ್ದರು.
* 55 ಅಡಿ ಆಳದ ತೆರೆದ ಬಾವಿಯಲ್ಲಿ ಬಿದ್ದ ಹಸು ಮತ್ತು ಕರುವನ್ನು ರಕ್ಷಿಸಲು ಹೋದ ಯಜಮಾನ ಬಾವಿಯಿಂದ ಮೇಲೆ ಬರಲಾಗದೆ ಸಹಾಯಕ್ಕಾಗಿ ಕೂಗಿಕೊಂಡಿದ್ದನು. ಅದನ್ನು ಕೇಳಿದ ಎಲ್.ನಿಶಾಂತ, ಎ.ಎನ್.ಅಶ್ವಿನ್ ಎಂಬ ಇಬ್ಬರು ಬಾಲಕರು, ಆ ವ್ಯಕ್ತಿಗೆ ಹಗ್ಗ ಕೊಟ್ಟು, ಸಹಾಯಕ್ಕಾಗಿ ಗ್ರಾಮಸ್ಥರನ್ನು ಕರೆತಂದು ಸಮಯ ಪ್ರಜ್ಞೆ ಮೆರೆದು ಕರು ಮತ್ತು ವ್ಯಕ್ತಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.
* ವಿದ್ಯುತ್ ಅಪಘಾತದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದ ಅಜ್ಜನಿಗೆ ಪ್ರಥಮ ಚಿಕಿತ್ಸೆ ಪ್ರಾಣ ರಕ್ಷಣೆ ಮಾಡಿದ ಧಾರವಾಡ ಕಲಘಟಗಿಯ ಮಹಮ್ಮದ್ ಸಮೀರ(5ನೇ ತರಗತಿ) ಧೈರ್ಯ ಪ್ರದರ್ಶಿಸಿದ್ದರು.
* ಉಡುಪಿಯ ಸಾಲಿಗ್ರಾಮದಲ್ಲಿ 16 ಅಡಿ ಉದ್ದದ 65 ಕೇಜಿ ತೂಕದ ಹೆಬ್ಬಾವು ಹಿಡಿದು ಸಾರ್ವಜನಿಕರ ಪ್ರಾಣ ರಕ್ಷಿಸಿದ ಬಿ.ಧೀರಜ್ ಐತಾಳ ಅವರಿಗೆ ಹೊಯ್ಸಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆಳದಿ ಚೆನ್ನಮ್ಮ ಪ್ರಶಸ್ತಿ ವಿಜೇತ ಮಕ್ಕಳು
* ದಕ್ಷಿಣ ಕನ್ನಡದ ಕಿನ್ನಿಗೋಳಿಯಲ್ಲಿ ರಿಕ್ಷಾ ಅಪಘಾತದಲ್ಲಿ ರಿಕ್ಷಾದ ಅಡಿಯಲ್ಲಿ ಸಿಲುಕಿದ್ದ ತನ್ನ ತಾಯಿಯನ್ನು ತಕ್ಷಣವೇ ಆಟೋ ರಿಕ್ಷಾ ಮೇಲೆತ್ತಿ ರಕ್ಷಿಸಿದ ವೈಭವಿ.
* ರೈಲ್ವೆ ಗೇಟ್ ಹಳಿಯ ಮೆಲೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಅಪರಿಚಿತ ಮಹಿಳೆಯ ಮತ್ತು ಇಬ್ಬರು ಮಕ್ಕಳನ್ನು ಪ್ರಾಣದ ಹಂಗು ತೊರೆದು ರಕ್ಷಿಸಿ ಬೆಳಗಾವಿಯ 6ನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ಅವರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.