ಸಾರಾಂಶ
ಬ್ಯಾಡಗಿ: ಕಟ್ಟು ಕಥೆಗಳನ್ನು ಹೇಳಿ ಆಚರಣೆ ನೆಪದಲ್ಲಿ ಮೌಢ್ಯ ಮತ್ತು ಕಂದಾಚಾರಗಳನ್ನು ಹೇರುತ್ತಿರುವ ಹಾಗೂ ಮಂತ್ರ-ತಂತ್ರಗಳ ಭಯವನ್ನು ಮುಂದೊಡ್ಡಿ ಸಾಮಾಜಿಕ ವ್ಯವಸ್ಥೆಯನ್ನೇ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನಕ್ಕಿಳಿದಿರುವ ಮೂಲಭೂತವಾದ ಅಥವಾ ಹೇರಲ್ಪಡುವ ಧರ್ಮವನ್ನು ತಿರಸ್ಕರಿಸೋಣ, ಬದಲಾಗಿ ಸಮಾಜವನ್ನು ವೈಜ್ಞಾನಿಕ ಚಿಂತನೆಗೊಳಪಡಿಸುವ ಮೂಲಕ ಜಾತಿ-ಮತ-ಪಂಥವೆಂಬ ಪ್ರಬೇಧ ಮೀರಿ ಸಕಲರಿಗೂ ಲೇಸನ್ನೇ ಬಯಸುವ ಲಿಖಿತ ಸಂವಿಧಾನ ನೀಡಿದ ಶರಣ ಧರ್ಮದ ಅವಶ್ಯವಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ನೆಹರು ನಗರದಲ್ಲಿರುವ ದಾನಮ್ಮದೇವಿ ದೇವಸ್ಥಾನದ 13ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಧರ್ಮದ ಮೊದಲ ತಿರುಳೇ ಮಾನವೀಯತೆ ಇವುಗಳ ನಡುವೆ ಒಂದಿಷ್ಟು ಸಂಪ್ರದಾಯ, ನಂಬಿಕೆಗಳು, ಆಚರಣೆಗಳು ಸೇರಿಕೊಂಡು ಒಟ್ಟಾರೆ ಧರ್ಮದ ಚೌಕಟ್ಟನ್ನು ನಿರ್ಧರಿಸುತ್ತವೆ. ಆದರೆ ಧನ-ಕನಕಾದಿ ಬಾಹ್ಯ ಸಿರಿಯ ವ್ಯಾಮೋಹಕ್ಕೊಳಗಾದ ವ್ಯಕ್ತಿಗಳು ತಮ್ಮ ದಿವ್ಯ ಬದುಕನ್ನೇ ನಿರ್ಲಕ್ಷಿಸಿ ಮಾಟ-ಮಂತ್ರ-ಅಂತ್ರ-ತಂತ್ರಗಳತ್ತ ಮುಖ ಮಾಡುತ್ತಿರುವುದು ಮೂರ್ಖತನದ ಪರಮಾವಧಿ ಎಂದರು.ಧರ್ಮ ಬಿಟ್ಟು ನಡೆಯದಿರಿ: ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಕೃಷಿ, ವ್ಯಾಪಾರ, ಸರ್ಕಾರಿ ಸೇವೆ, ರಾಜಕಾರಣ ಎಲ್ಲದರಲ್ಲಿಯೂ ಧರ್ಮ ಅಡಗಿದೆ. ಬಾಹ್ಯ ಜಗತ್ತಿಗೆ ನಾವು ಎಷ್ಟೇ ಸಿರಿವಂತರಾದರೂ ಧರ್ಮವನ್ನು ಬಿಟ್ಟು ನಡೆದುಕೊಂಡರೇ ನಮ್ಮಂತಹ ಕಡುಬಡುವರು ಇನ್ನೊಬ್ಬರಿಲ್ಲ. ದೇವರು ನಮಗೆ ಸಿರಿ-ಸಂಪದ, ಸ್ಥಾನಮಾನ ಯಾವುದಕ್ಕೂ ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾನೆ ಹೀಗಿದ್ದರೂ ಸಹ ಇನ್ನೊಬ್ಬರ ಏಳಿಗೆಯನ್ನು ಸಹಿಸಿಕೊಳ್ಳದ ನಾವುಗಳು ಶಾಂತಿ, ಸಮಾಧಾನ ಕಳೆದುಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ದಾನಮ್ಮದೇವಿ ಕೃಪೆಯಿಂದ 6 ಜೊತೆ ನವ ವಿವಾಹಿತರು ಶ್ರೀಗಳ ಸಮ್ಮುಖದಲ್ಲಿ ಜೀವನಕ್ಕೆ ಕಾಲಿರಿಸಿದರು. ವೇದಿಕೆಯಲ್ಲಿ ರಾಚಯ್ಯನವರು ಓದಿಸೋಮಠ, ಡಾ.ಎಸ್.ಎನ್.ನಿಡಗುಂದಿ, ರಾಜು ಮೋರಿಗೇರಿ, ಅಶೋಕ ಮೂಲಿಮನಿ, ಚಂದ್ರಶೇಖರ ಅಂಗಡಿ, ಮಹೇಶ್ವರಿ ಪಸಾರದ, ಅನುರಾಧ ಮೋರಿಗೇರಿ ಹಾಗೂ ಇನ್ನಿತರರಿದ್ದರು. ದಾನಮ್ಮದೇವಿ ದೇವಸ್ಥಾನದ ಪ್ರಧಾನ ಅರ್ಚಕ ಅರುಣಶಾಸ್ತ್ರೀ ಹಿರೇಮಠ ಅವರು ಶಾಸ್ತ್ರೋಕ್ತವಾಗಿ ಮದುವೆಗಳನ್ನು ನೆರವೇರಿಸಿದರು.