ಧಾರವಾಡ:

ಮುಂಗಾರು ಬಿತ್ತನೆ ಪೂರೈಸಿರುವ ರೈತರು ಮಳೆ ಬಾರದೇ ಈಗ ಕಂಗಾಲಾಗಿದ್ದಾರೆ. ನಿತ್ಯವೂ ಮಳೆಯ ನಿರೀಕ್ಷೆ ಹುಸಿಗೊಂಡಿದ್ದರಿಂದ ಮಳೆ ತರಿಸಲು ಭಗೀರಥ ಪ್ರಯತ್ನಗಳಿಗೆ ಈಗ ರೈತರು ಮುಂದಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ನವಲಗುಂದ ತಾಲೂಕು ಶಿರೂರಿನಲ್ಲಿ ಕತ್ತೆಗಳ ಮದುವೆ ಜರುಗಿದ್ದು, ತಾಲೂಕಿನ ಅಮ್ಮಿನಬಾವಿ ಗ್ರಾಮದ ರೈತರು ಜು. 4ರಂದು ಕತ್ತೆಗಳ ಮದುವೆ ಮಾಡಲು ಮುಂದಾಗಿರುವುದು ಗಮನ ಸೆಳೆದಿದೆ. ಇದಕ್ಕಾಗಿ ಲಗ್ನಪತ್ರಿಕೆಯನ್ನೂ ಮುದ್ರಿಸಲಾಗಿದೆ.

ಗ್ರಾಮದ ಎಲ್ಲ ಜಾತಿ, ವರ್ಗ, ಪಂಗಡಗಳ ರೈತರು ಒಗ್ಗೂಡಿ ಯುವಕ ಸಂಘಗಳ, ಮಹಿಳಾ ಮಂಡಳಗಳ, ಭಜನಾ ಮಂಡಳಗಳ ಮತ್ತು ವಿವಿಧ ದೇವಾಲಯಗಳ ಸೇವಾ ಸಮಿತಿಗಳ ಪದಾಧಿಕಾರಿಗಳು ಸೇರಿ ಈ ವಿವಾಹ ಕಾರ್ಯಕ್ಕೆ ಮುಂದಾಗಿದ್ದಾರೆ. ಅಮ್ಮಿನಬಾವಿ ಗ್ರಾಮದ ಗ್ರಾಮದೇವಿಯರ ಪಾದಗಟ್ಟಿಯ ತಾಣದ ಹಂದರದಲ್ಲಿ ಜುಲೈ 4ರಂದು ಮಧ್ಯಾಹ್ನ 12.30ಕ್ಕೆ ಸಲ್ಲುವ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಮೇಘರಾಜ ಎಂದು ಸಂಬೋಧಿಸುವ ಗಂಡು ಕತ್ತೆಯ ಜತೆಗೆ ವಸುಂಧರಾದೇವಿ ಎಂದು ಹೆಸರಿಸಿರುವ ಹೆಣ್ಣು ಕತ್ತೆಯ ವಿವಾಹ ಮಹೋತ್ಸವ ಜರುಗಲಿದೆ. ಇದಕ್ಕೂ ಮೊದಲು ರೈತರು ವರುಣನ ಕೃಪೆಗಾಗಿ ಭಕ್ತಿಯ ಸಂಕಲ್ಪ ಪೂಜೆ ನೆರವೇರಿಸಲಿದ್ದಾರೆ ಎಂದು ಗ್ರಾಮಸ್ಥರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಸಾಮಾನ್ಯವಾಗಿ ವಿವಾಹ ಕಾರ್ಯಗಳಲ್ಲಿ ಲಗ್ನಪತ್ರಿಕೆ ಮುದ್ರಿಸುವಂತೆ ಕತ್ತೆಗಳ ಮದುವೆಗೂ ಅಧಿಕೃತವಾಗಿ ಲಗ್ನಪತ್ರಿಕೆ ಮುದ್ರಿಸಲಾಗಿದ್ದು, ಅಮ್ಮಿನಬಾವಿಯ ಕೆಲವು ಓಣಿಯವರು ವರನ ಕಡೆಯವರಾಗಿ ಮತ್ತು ಇನ್ನು ಕೆಲವು ಓಣಿಯವರು ಕನ್ಯೆಯ ಕಡೆಯವರಾಗಿ ಈ ಬೀಗತನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ರೈತರನ್ನೊಳಗೊಂಡು ಸಕಲರೂ ಸ್ವಯಂಸ್ಫೂರ್ತಿಯಿಂದ ದೇಣಿಗೆ ನೀಡಿದ್ದು, ವಿವಾಹ ಕಾರ್ಯದಲ್ಲಿ ಗ್ರಾಮದ ಸಮಸ್ತ ಜನತೆ ಪಾಲ್ಗೊಂಡು ಮದುವೆಯ ಊಟ ಶಿರಾ, ಅನ್ನ, ಸಾರು ಮತ್ತು ಬದನೆಕಾಯಿ ಪಲ್ಯ ಸವಿಯುವಂತೆ ಈಗಾಗಲೇ ಎಲ್ಲೆಡೆ ಮನವಿ ಮಾಡಲಾಗಿದೆ.

ಮಂಗಳ ಕಾರ್ಯದಲ್ಲಿ ಡೊಳ್ಳು, ಕರಡಿಮಜಲು ಸೇರಿ ವಿವಿಧ ಜನಪದ ವಾದ್ಯ ಮೇಳಗಳು ಮೇಳೈಸಲಿವೆ.ಜನಪದರ ನಂಬಿಕೆ....


ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಆದರೂ ನೂರಾರು ವರ್ಷಗಳಿಂದ ಕತ್ತೆಗಳ ಮದುವೆಯಂತಹ ಜಾನಪದ ಸಂಸ್ಕೃತಿ ಪರಂಪರೆಯ ವಿಶಿಷ್ಟ ಆಚರಣೆಗಳು ನಮ್ಮಲ್ಲಿ ಹಾಸುಹೊಕ್ಕಾಗಿವೆ. ಇಲ್ಲಿ ಪ್ರಕೃತಿಯ ಮೇಲಿನ ಅಚಲವಾದ ವಿಶ್ವಾಸ, ವರುಣ ದೇವರ ಕೃಪೆಯ ಮೇಲಿನ ಭಕ್ತಿಯ ಬದ್ಧತೆ, ಮಳೆ ಬಂದೇ ಬರುತ್ತದೆ ಎಂಬ ರೈತರ ಮನದಾಳದ ಆಶಾಭಾವನೆ ಹಾಗೂ ಸರ್ವ ಸಮಾಜಗಳ ಒಗ್ಗಟ್ಟಿನ ಸಂಕೇತಾತ್ಮಕ ಅಭಿವ್ಯಕ್ತಿಯೇ ಈ ಕತ್ತೆಗಳ ಮದುವೆ ಎಂದು ಚಿಂತಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.