ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಿಬಿ ಜಿ ರಾಮ್‌ಜೀ ಮಸೂದೆಯು ಯೋಜನೆ ನರೇಗಾ ಕಾಮಗಾರಿಯಡಿ ನಡೆಯುತ್ತಿದ್ದ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲಿದೆ. ಯೋಜನೆ ಬಗ್ಗೆ ಜನರಲ್ಲಿ ತಪ್ಪಕಲ್ಪನೆ ಬೇಡ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಹೇಳಿದರು.
ಹಾವೇರಿ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಿಬಿ ಜಿ ರಾಮ್‌ಜೀ ಮಸೂದೆಯು ಯೋಜನೆ ನರೇಗಾ ಕಾಮಗಾರಿಯಡಿ ನಡೆಯುತ್ತಿದ್ದ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲಿದೆ. ಜತೆಗೆ 25 ಕೆಲಸದ ದಿನಗಳ ಹೆಚ್ಚಳ, ಆಧುನಿಕ ತಂತ್ರಜ್ಞಾನ, ಜಿಪಿಎಸ್, ಬಯೋಮೆಟ್ರಿಕ್ ಸ್ಪರ್ಶ ನೀಡಲಾಗಿದೆ. ಯೋಜನೆ ಬಗ್ಗೆ ಜನರಲ್ಲಿ ತಪ್ಪಕಲ್ಪನೆ ಬೇಡ ಎಂದು ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ನಗರ, ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ದುಡಿಯುವ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ಮನರೇಗಾ ಯೋಜನೆಗೆ ಕೆಲವು ವಿಷಯಗಳನ್ನು ಮಾರ್ಪಾಡು ಮಾಡುವ ಮೂಲಕ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಮುಂದಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಹೆಸರನ್ನು ವಿಬಿ ಜಿ ರಾಮ್‌ಜೀ (ವಿಕಸಿತ ಭಾರತ ಗ್ಯಾರಂಟಿ ರೋಜಗಾರ ಹಾಗೂ ಜೀವನೋಪಾಯ ಯೋಜನೆ) ಎಂದು ಹೆಸರನ್ನು ಬದಲಾಯಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ನರೇಗಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದರು.ಇದರ ಜತೆಗೆ ನರೇಗಾದಲ್ಲಿ ಮಾನವ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿದೆ. ರಸ್ತೆ ದುರಸ್ತಿ, ಗ್ರಾಮೀಣ ಭಾಗದಲ್ಲಿ ಗೋದಾಮುಗಳ ನಿರ್ಮಾಣ, ಕುಡಿಯುವ ನೀರು ಸೇರಿದಂತೆ ಹಲವು ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಕೈಗೊಳ್ಳಲು ಅವಕಾಶವಿದೆ. ಜಿಪಿಎಸ್ ತಂತ್ರಜ್ಞಾನ, ಬಯೋಮೆಟ್ರಿಕ್ ಸಿಸ್ಟ್ಂ, ಎಐ ತಂತ್ರಜ್ಞಾನ ಹೀಗೆ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಕಳಪೆ ಕಾಮಗಾರಿ ತಡೆಯಲು ಇದು ಸಹಕಾರಿಯಾಗಿದ್ದು, ಕಾಂಗ್ರೆಸ್ ಅಪಪ್ರಚಾರಕ್ಕೆ ಜನರು ಕಿವಿಗೊಡಬಾರದು ಎಂದರು.
ಗ್ರಾಮೀಣ ಘಟಕದ ಅಧ್ಯಕ್ಷ ಮಾರುತಿ ಗೊರವರ ಮಾತನಾಡಿ, ಮನರೇಗಾ ಯೋಜನೆಯಲ್ಲಿನ ಕೆಲವು ಲೋಪದೋಷಗಳನ್ನು ತಿದ್ದುಪಡಿ ಮಾಡಿ ಕೇಂದ್ರ ವಿಬಿ ಜೀ ರಾಮ್ ಜಿ ಹೆಸರಿನಲ್ಲಿ ಯೋಜನೆಗೆ ಮತ್ತಷ್ಟು ಬಲ ತುಂಬುತ್ತಿದೆ. 2047ಕ್ಕೆ ವಿಕಸಿತ ಭಾರತ ಮಾಡಲು ಹೊರಟಿರುವ ಕೇಂದ್ರ ಸರ್ಕಾರ ಹಲವು ಟೆಕ್ನಾಲಜಿಯನ್ನು ಅಳವಡಿಸಿದೆ. ಹೀಗಾಗಿ ಕಾಂಗ್ರೆಸ್‌ನವರು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಶಹರ ಬಿಜೆಪಿ ಅಧ್ಯಕ್ಷ ಕಿರಣ ಕೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಬಸವರಾಜ ಕೋಳಿವಾಡ, ಗುಡ್ಡಪ್ಪ ಭರಡಿ, ವಿನಯ ತಹಸೀಲ್ದಾರ ಇತರರು ಇದ್ದರು.