ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಗರಹೊಳೆಯ ಆದಿವಾಸಿ ನಿವಾಸಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಮತ್ತೊಮ್ಮೆ ಪರಿಶೀಲಿಸಲು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಾಗರಹೊಳೆ ಭಾಗದ ಹಾಡಿಗಳಲ್ಲಿನ ಅರಣ್ಯ ಹಕ್ಕು ಕಾಯ್ದೆ ಅರ್ಜಿಗಳ ವಿಲೇವಾರಿ ಬಗ್ಗೆ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಹಾಡಿ ಮುಖಂಡರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲುಸ್ತುವಾರಿ ಸಮಿತಿ ಸದಸ್ಯ ನಾಣಚ್ಚಿ ಗದ್ದೆಹಾಡಿಯ ರಮೇಶ್, ಬ್ರಹ್ಮಗಿರಿ-ಕಾಂತೂರು ಹಾಡಿಯ ಪ್ರಕಾಶ್ ಹಾಗೂ ಮುತ್ತಪ್ಪ ಮಾತನಾಡಿ, ಕಾನೂರು ಗ್ರಾಪಂ ವ್ಯಾಪ್ತಿಯ ಬ್ರಹ್ಮಗಿರಿ ಕಾಂತೂರು-ಹಾಡಿಯ ಅರಣ್ಯ ಹಕ್ಕು ಅರ್ಜಿಗಳ ಮರು ಸರ್ವೆ ನಡೆಸಿ ಹಕ್ಕುಪತ್ರ ವಿತರಿಸಲು ಕೋರಿದರು.

ಮುಖಂಡರಾದ ಪುಷ್ಪ ಅವರು ಮಾತನಾಡಿ, ದೇವರಪುರ ದೇವರಕಾಡು ಅರಣ್ಯ ಹಕ್ಕು ಅರ್ಜಿಗಳ ಮರು ಸರ್ವೆ ನಡೆಸುವಂತೆ ಕೋರಿದರು.ಬೊಮ್ಮಾಡು ಹಾಡಿಯ ಸೋಮಯ್ಯ ಮಾತನಾಡಿ, ಈಗಾಗಲೇ ನೀಡಿರುವ ಹಕ್ಕುಪತ್ರದಲ್ಲಿನ ಜಾಗದ ವಿಸ್ತೀರ್ಣದಲ್ಲಿ ಅನ್ಯಾಯವಾಗಿದೆ. ಮತ್ತೊಮ್ಮೆ ಪರಿಶೀಲಿಸಿ ಹಕ್ಕುಪತ್ರ ಸರಿಪಡಿಸುವಂತೆ ಕೋರಿದರು. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವಂತೆ ಹಾಗೂ ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಆದಿವಾಸಿಗಳ ಕುಂದುಕೊರತೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಯವರು ಇಲಾಖಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ತೇಜರಾಜು, ಸಿದ್ದೇಗೌಡ, ಬಾಲಕೃಷ್ಣ ರೈ, ಹಾಡಿ ಮುಖಂಡರಾದ ರಮೇಶ್, ಪ್ರಕಾಶ್, ತಿಮ್ಮ, ಶಿವು, ಕಾಳ, ಸೋಮಯ್ಯ, ಪುಷ್ಪ ಮತ್ತಿತರರು ಹಾಜರಿದ್ದರು.


ಜಿಲ್ಲೆಯ ಪಿವಿಟಿಜಿ ಜನಾಂಗದವರಿಗೆ ಹ್ಯಾಬಿಟೇಟ್ ಹಕ್ಕು ನೀಡಲು, ಸಮುದಾಯ ಹಕ್ಕುಗಳಿಗೆ ಹಕ್ಕುಪತ್ರ ವಿತರಿಸಲು ಕೋರಿದರು. ಅಲ್ಲದೆ ಸಾಕ್ಷ್ಯ ಲಭ್ಯವಿಲ್ಲ ಎಂದು ತಿರಸ್ಕರಿಸಿರುವ ಅರ್ಜಿಗಳ ಸ್ಥಳ ಮಹಜರು ಮಾಡಿ ಹಕ್ಕುಪತ್ರ ವಿತರಿಸಿ.

- ತಿಮ್ಮ, ಶಿವು

ನಾಗರಹೊಳೆ ಹಾಡಿ