ಸಾಮಾಜಿಕ ಅನಿಷ್ಟಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಿದವರು ನಿಜಶರಣ ಅಂಬಿಗರ ಚೌಡಯ್ಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಹೇಳಿದರು.

ಬಳ್ಳಾರಿ: ನೇರ, ನಿಷ್ಠುರ, ತೀಕ್ಷ್ಣ ಬರಹಗಳ ಮೂಲಕ ವರ್ಣವ್ಯವಸ್ಥೆ, ಲಿಂಗ ತಾರತಮ್ಯ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಅನಿಷ್ಟಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಿದವರು ನಿಜಶರಣ ಅಂಬಿಗರ ಚೌಡಯ್ಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಅಂಬಿಗ ಎಂದರೆ ಭರವಸೆಯ ಬೆಳಕು ಎಂದು ಸಾರಿದ ಮಹಾನ್ ವಚನಕಾರ ಅಂಬಿಗರ ಚೌಡಯ್ಯ. 12ನೇ ಶತಮಾನದ ಶಿವಶರಣರ ಸಾಲಿನಲ್ಲಿ ಇವರೂ ಸಮಾನರಾಗಿದ್ದರು. ಸಾಮಾಜಿಕ ಪರಿವರ್ತನೆಗಾಗಿ ಬಸವಣ್ಣನವರ ಹೆಗಲಿಗೆ ಹೆಗಲಾಗಿ ನಿಂತವರಲ್ಲಿ ಪ್ರಮುಖರು. ನಿರ್ಮಲ ಭಕ್ತಿ, ನಿಸ್ವಾರ್ಥ ಸೇವೆಯೇ ಭಗವಂತನನ್ನು ಒಲಿಸಿಕೊಳ್ಳುವ ಮಾರ್ಗಗಳು ಎಂದು ಬಿಂಬಿಸಿದವರು ಚೌಡಯ್ಯನವರು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸರ್ವರಿಗೆ ‘ಸಮಬಾಳು- ಸರ್ವರಿಗೆ ಸಮಪಾಲು’ ಎನ್ನುವ ದಿಸೆಯಂತೆ, 2014ರಲ್ಲಿ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಆಚರಣೆಗೆ ನಿರ್ಧರಿಸಲಾಯಿತು ಎಂದು ಚಿದಾನಂದಪ್ಪ ತಿಳಿಸಿದರು.

ಸಂಗನಕಲ್ಲಿನ ನಿವೃತ್ತ ಶಿಕ್ಷಕ ಕೆ.ಬಿ. ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭವಿಯಾಗಿದ್ದವರು. ಇವರು ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ನಾವು ಕಾಣಬಹುದಾಗಿದೆ ಎಂದರು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಶಿವಪುರ (ಚೌಡದಾನಪುರ) ಗ್ರಾಮದಲ್ಲಿ ಜನಿಸಿದ ಚೌಡಯ್ಯನವರು ತಾಯಿ ಪಂಪಾದೇವಿ, ತಂದೆ ವಿರೂಪಾಕ್ಷನ ಮಗನಾಗಿದ್ದರು. ವಚನಕಾರ ಅಂಬಿಗರ ಚೌಡಯ್ಯ ಎಂಬ ಅಂಕಿತನಾಮದೊಂದಿಗೆ ಸುಮಾರು 279 ವಚನಗಳನ್ನು ಬರೆದರು. ಅವರ ಪದ್ಯಗಳು ಅವರ ಆಳವಾದ ಅನುಭವಗಳು ಮತ್ತು ಸಾಮಾಜಿಕ ಪ್ರಜ್ಞೆಯ ಪ್ರತಿಬಿಂಬವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆ.ಆರ್. ಎರೇಗೌಡ ತಂಡ ವಚನ ಸಂಗೀತ ಪ್ರಸ್ತುತಪಡಿಸಿತು.

ಗಮನಸೆಳೆದ ಮೆರವಣಿಗೆ

ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾತಂಡಗಳು ಬಹಗವಹಿಸಿ ಮೆರಗು ನೀಡಿದವು. ಮೆರವಣಿಗೆಯಲ್ಲಿ ಕಳಸ-ಕುಂಭ ಹೊತ್ತ ನೂರಾರು ಮಹಿಳೆಯರು ಗಮನಸೆಳೆದರು.

ಮೆರವಣಿಗೆಯು ಡಾ. ರಾಜ್ ಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ- ರೈಲ್ವೇ ನಿಲ್ದಾಣ ರಸ್ತೆ- ಹಳೆ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ- ಎಚ್.ಆರ್. ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಬಿ. ಮೌಲಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ನಿವೃತ್ತ ಆರ್ ಟಿಒ ಅಧಿಕಾರಿ ಪಂಪಾಪತಿ, ನಿವೃತ್ತ ಚಿತ್ರಕಲಾ ಶಿಕ್ಷಕ ರಮೇಶ್.ಯು., ನಿವೃತ್ತ ಕೆಕೆಆರ್ ಟಿಸಿ ಅಧಿಕಾರಿ ಹನುಮಂತಪ್ಪ, ಸಮಾಜದ ಮುಖಂಡರಾದ ಗಣೇಶ್ ಬಾರಿಕಾರ, ರಂಗಸ್ವಾಮಿ, ಹುಲುಗಪ್ಪ, ಮೋಹನ್, ದ್ರಾಕ್ಷಾಯಿಣಿ ಸೇರಿದಂತೆ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.