ಶಿವಾನಂದ ಗೊಂಬಿ

ಹುಬ್ಬಳ್ಳಿ:

ಎಂಟ್‌ ದಿನಾ ವಸ್ತಿ ಉಳ್ಕೊಂಡ, ನಮ್‌ ಹೆಸರು ಮಾರಾಟ ಮಾಡೇವ್ರಿ.. ಇನ್ನುವರೆಗೂ ರೊಕ್ಕ ಕೊಡವಲ್ರು.. ಹೀಂಗ ಆದ್ರ ನಮ್ಮಂಥ ರೈತರು ಏನ್ಮಾಡಬೇಕ್ರಿ.. ರೊಕ್ಕ ಕೊಟ್ಟು ಪುಣ್ಯ ಕಟ್ಕೊಳ್ರಿ.. ರೊಚ್ಚಿಗೆಬ್ಬಿಸಬ್ಯಾಡ್ರಿ...!

ಇದು ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಬೆಂಬಲ ಬೆಲೆ ಕೇಂದ್ರದಲ್ಲಿ ಹೆಸರು ಮಾರಾಟ ಮಾಡಿ ಈ ವರೆಗೂ ಹಣ ಬಾರದ ವಿರೂಪಾಕ್ಷ ಪಾಯಣ್ಣವರ ನೊಂದು ನುಡಿಯುವ ಮಾತು. ಜತೆಗೆ ಎಚ್ಚರಿಕೆ ಸಂದೇಶ.

ಬ್ಯಾಹಟ್ಟಿ ಕೇಂದ್ರದಲ್ಲಿ ಹೆಸರು ಮಾರಾಟ ಮಾಡಿದ 74 ರೈತರಿಗೆ ಮಾರಾಟ ಮಾಡಿ ಬರೋಬ್ಬರಿ ನಾಲ್ಕುವರೆ ತಿಂಗಳಾದರೂ ಹಣ ಬಂದಿಲ್ಲ. ಬದಲಿಗೆ ನಿಮ್ಮ ಹೆಸರು ತೆಗೆದುಕೊಂಡು ಹೋಗಿ ಎಂದು ನೋಟಿಸ್‌ ಬಂದಿದೆ. ಜತೆಗೆ ಇದೀಗ ರೈತರೇ ಒತ್ತಡ ಹೇರಿ ಮಾರಾಟ ಮಾಡಿದ್ದರು ಎಂದು ಅಧಿಕಾರಿಗಳು ಹೊಸ ರಾಗ ತೆಗೆದಿರುವುದು ರೈತರನ್ನು ರೊಚ್ಚಿಗೆಬ್ಬಿಸಿದೆ.


ಮೊದಲೇ ಸಾಲಸೋಲ ಮಾಡಿ ಬೆಳೆ ಬೆಳೆದಿದ್ದು ರೈತರು ಮಾರಾಟ ಮಾಡಿದ ಹಣದಿಂದ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದರೆ ಆಯಿತು. ಈ ಬಾರಿಯಾದರೂ ಸಾಲ ಮಾಡಬಾರದು ಎಂದು ಅಂದುಕೊಂಡಿದ್ದರು. ಆದರೆ, ಮಾರಾಟ ಮಾಡಿದ ಬೆಳೆಯನ್ನೇ ಇದೀಗ ತೆಗೆದುಕೊಂಡು ಹೋಗಿ ಎನ್ನುವ ಮೂಲಕ ರೈತರ ಆಸೆಗೆ ಅಧಿಕಾರಿಗಳು ತಣ್ಣೀರೆರೆಚಿದ್ದಾರೆ.

ಬ್ಯಾಹಟ್ಟಿ ರೈತ ವಿರೂಪಾಕ್ಷ ಪಾಯಣ್ಣವರ ಅವರಿಗೆ 3 ಎಕರೆ ಜಮೀನಿದ್ದು 9 ಕ್ವಿಂಟಲ್‌ ಹೆಸರು ಬೆಳೆ ಬೆಳೆದಿದ್ದಾರೆ. ಬರೋಬ್ಬರಿ 8 ದಿನ ಬೆಂಬಲ ಬೆಲೆ ಕೇಂದ್ರ ಎದುರಿಗೆ ಹೆಸರು ಹರವಿಕೊಂಡು ಹಗಲು-ರಾತ್ರಿ ಕಾಯ್ದಿದ್ದಾರೆ. ಖರೀದಿ ಕೇಂದ್ರದ ಸಿಬ್ಬಂದಿ ಎಲ್ಲ ನಿಯಮಗಳಿಗೆ ಬದ್ಧರಾಗಿ ಮಾರಾಟ ಮಾಡಿದ್ದಾರೆ. ಇದೀಗ ಗುಣಮಟ್ಟ ಸರಿಯಿಲ್ಲ ಎಂದು ಹೇಳಿರುವುದು ಇವರಿಗೆ ಆಘಾತ ತರಿಸಿದೆ. ನನಗೆ ಬರಬೇಕಿದ್ದ ಮಾರಾಟದ ₹ 78912 ತಕ್ಷಣ ನೀಡಬೇಕೆಂದು ಆಗ್ರಹಿಸಿದ್ದಾರೆ. ಇನ್ನೊಬ್ಬ ರೈತ ಅಶೋಕ ನವಲೂರ 26 ಎಕರೆಯಲ್ಲಿ ಬೆಳೆದ 50 ಕ್ವಿಂಟಲ್‌ ಹೆಸರು ಮಾರಾಟ ಮಾಡಿದ್ದು ಇವರಿಗೂ ಸಹ ₹ 4,38,400 ಬರಬೇಕಿದೆ.

ನಾವು ಒತ್ತಡ ಹಾಕಿ ಬೆಳೆ ಮಾರಾಟ ಮಾಡಿದ್ದೇವೆ ಎಂದು ಇದೀಗ ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ಅವರ ಮೇಲೆ ಒತ್ತಡ ಹಾಕಿದ್ದರೆ ಅವರೇಕೆ ಪೊಲೀಸ್‌ರಿಗೆ ದೂರು ನೀಡಿಲಿಲ್ಲ ಎಂದು ಪ್ರಶ್ನಿಸಿರುವ ರೈತರು, ಇದರಲ್ಲಿ ಏನೋ ಗೋಲ್‌ಮಾಲ್‌ ಆಗಿದ್ದು ಅದನ್ನು ನಮ್ಮ ತಲೆಗೆ ಕಟ್ಟಲು ಮುಂದಾಗಿದ್ದಾರೆ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.ಜಿಲ್ಲಾಡಳಿತಕ್ಕೂ ಸವಾಲು

ರೈತರು ದುಡ್ಡು ಕೊಡಿ ಎಂದು ಕೇಳುತ್ತಿದ್ದರೆ, ಖರೀದಿ ಕೇಂದ್ರದ ಸಿಬ್ಬಂದಿ ಒತ್ತಡ ಹಾಕಿ ಮಾರಾಟ ಮಾಡಿದರು ಎಂದು ಲಿಖಿತ ಉತ್ತರ ನೀಡಿದ್ದಾರೆ. ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದೇ ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ. ಜಿಲ್ಲಾಡಳಿತ ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನೆರಡು ದಿನದಲ್ಲಿ ಜಿಲ್ಲಾಡಳಿತ ರೈತರಿಗೆ ಹಣ ನೀಡುವ ಕುರಿತು ಕ್ರಮಕೈಗೊಳ್ಳದೆ ಹೋದರೆ ನಿರಂತರ ಹೋರಾಟಕ್ಕೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.ಬ್ಯಾಹಟ್ಟಿಯಲ್ಲಿ ರೈತರ ಹೆಸರು ಬೆಳೆ ಖರೀದಿಸಿ ಇದೀಗ ಒತ್ತಡ ಹಾಕಿ ಮಾರಿದ್ದಾರೆ ಎಂದು ಸಿಬ್ಬಂದಿ ಹೇಳಿರುವುದು ಗೊತ್ತಾಗಿದೆ. ಅಲ್ಲಿನ ಸಮಸ್ಯೆ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡು ಸಮಸ್ಯೆ ಬಗೆಹರಿಸುತ್ತೇವೆ.

ಎನ್‌.ಎಚ್‌. ಕೋನರಡ್ಡಿ, ಶಾಸಕ