ಯಲ್ಲಾಪುರ: ನಾವು ಗಳಿಸುವ ಗೆಲುವು ನಮ್ಮ ಪ್ರಾಮಾಣಿಕ ಶ್ರಮದಿಂದ ಸಿಕ್ಕರೆ ಅದು ಜೀವನದ ನಿಜವಾದ ಗೆಲುವು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ್ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ತಾಪಂ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಯಲ್ಲಾಪುರ ಘಟಕ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚಾಯತ್ ರಾಜ್ ವ್ಯವಸ್ಥೆಗೆ ಗೌರವಯುತವಾದ ಶ್ರೀಮಂತ ಇತಿಹಾಸವಿದೆ. ಸಮುದಾಯದ ಅಭಿವೃದ್ಧಿಯನ್ನು ಸಂಘಟಿತವಾಗಿ ಸಾಧಿಸಲು ಪಂಚಾಯತ್ ರಾಜ್ ಆಡಳಿತ ನೆರವಾಗಲಿದೆ. ಸಮಾಜದ ಸಂಪರ್ಕದಲ್ಲಿ ಸದಾ ಇದ್ದು ಜನರ ಪ್ರೀತಿಗೆ ಪಾತ್ರವಾದರೆ ಆ ಸೇವೆ ಸಾರ್ಥಕ್ಯ ಕಾಣುತ್ತದೆ ಎಂದು ಹೇಳಿದರು.ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಉದ್ಘಾಟಿಸಿದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಅಶೋಕ ಬಂಟ ಮಾತನಾಡಿ, ಸರ್ಕಾರದ ಕೆಲಸ ಎಂದರೆ ದೇವರ ಕೆಲಸ ಎಂದು ನಂಬಿ ನಡೆದರೆ ಉತ್ತಮ ಶ್ರೇಯಸ್ಸು ಸಿಗಲು ಸಾಧ್ಯ. ನಿರಂತರವಾಗಿ ಚಟುವಟಿಕೆಯಿಂದ ಇರುವ ವ್ಯಕ್ತಿ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಸಾಮಾಜಿಕ ಸೇವೆಯಲ್ಲಿ ಆತ್ಮತೃಪ್ತಿ ಇರಲಿ ಎಂದರು.ಸಂಜೀವ ಕುಮಾರ್ ಹೊಸ್ಕೇರಿ ಮಾತನಾಡಿದರು. ತಾಪಂ ಯೋಜನಾಧಿಕಾರಿ ರಾಘವ್, ಲೆಕ್ಕಾಧಿಕಾರಿ ಮೋಹನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಕಾರ್ಯದರ್ಶಿ ಶಿವಕುಮಾರ್, ತಾಪಂನ ಸಹಾಯಕ ಅಧಿಕಾರಿ ಮಂಜುನಾಥ ಆಗೇರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಪಂಗಳಲ್ಲಿ ಉತ್ತಮ ತೆರಿಗೆ ವಸೂಲಿ ಮಾಡಿದ ನಾಲ್ಕು ಪಂಚಾಯಿತಿಗಳ ವಿವಿಧ ಸಿಬ್ಬಂದಿಯನ್ನು ಅಭಿನಂದಿಸಲಾಯಿತು.ತಾಲೂಕಿನ ಪಿಡಿಒ, ತಾಲೂಕು ಮತ್ತು ಗ್ರಾಪಂ ನೌಕರರ ವರ್ಗ, ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಪ್ರಭಾಕರ ಭಟ್ಟ ಮಾತನಾಡಿ, ಪ್ರತಿಯೊಂದು ಇಲಾಖೆಯಲ್ಲಿಯೂ ಒತ್ತಡ ಇರುತ್ತದೆ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕಿದೆ ಎಂದರು.
ರೇಷ್ಮಾ ಎಲ್. ಪ್ರಾರ್ಥಿಸಿದರು. ರವಿ ಪಟಗಾರ ಸ್ವಾಗತಿಸಿದರು. ಗಣಪತಿ ಭಾಗ್ವತ ಕಾರ್ಯಕ್ರಮ ನಿರೂಪಿಸಿದರು. ಪಿಡಿಒ ಅಣ್ಣಪ್ಪ ವಡ್ಡರ ವಂದಿಸಿದರು.