ನರೇಗಲ್ಲ: ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುದುವುದಲ್ಲದೇ, ನೆಮ್ಮದಿಯ ಜೀವನಕ್ಕೆ ಅಡಿಪಾಯ ಹಾಕುತ್ತದೆ. ಮದುವೆ ಸಮಯದಲ್ಲಿ ವರದಕ್ಷಿಣೆ ತಿರಸ್ಕರಿಸುವ ಗುಣ ಬೆಳಸಿಕೊಳ್ಳಬೇಕು ಎಂದು ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಶ್ರೀಗಳು ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದ ಅನ್ನದಾನಿಶ್ವರ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದರು.

ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿ, ಬಡವರ ಪಾಲಿನ ವರದಾನವಾಗಿರುವ ಸಾಮೂಹಿಕ ವಿವಾಹ ಪರಂಪರೆ ಇಂದಿನದಲ್ಲ. ಅದು ಬಸವಾದಿ ಶರಣರು ಹಾಕಿಕೊಟ್ಟ ಸನ್ಮಾರ್ಗ ಎಂದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಶೀರ್ವಾದವಾಗಿದ್ದು, ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ, ಸರಳ ಹಾಗೂ ಸಾರ್ಥಕವಾಗಿ ವಿವಾಹವನ್ನು ನೆರವೇರಿಸಲು ನೆರವಾಗುತ್ತದೆ. ಇದು ನಮ್ಮ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಮದುವೆ ಎಂದರೆ ವೈಭವವಲ್ಲ, ಜೀವನದ ಪವಿತ್ರ ಬಾಂಧವ್ಯ. ವರದಕ್ಷಿಣೆ ಸಾಮಾಜಿಕ ಪಿಡುಗು ಆಗಿದ್ದು, ಅದನ್ನು ಪಡೆಯುವುದು ಬಿಟ್ಟು, ತಿರಸ್ಕರಿಸುವ ಗುಣ ಬೆಳಸಿಕೊಳ್ಳಿ ಎಂದು ಹೇಳಿದರು.

ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ ಮಿಥುನ್ ಪಾಟೀಲ ಮಾತನಾಡಿ, ವಧು–ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.


ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳು ಎನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ಸತ್ಕಾರ ಮಾಡಬೇಕು. ಇಂತಹ ಸಾಮಾಜಿಕ ಕಳಕಳಿಯೊಂದಿಗೆ ಸಮಿತಿಯವರು ನಡೆಸುವ ಸಾಮೂಹಿಕ ವಿವಾಹ ಮಹೋತ್ಸವಗಳು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರ ಮದುವೆಗಳು ಅಲ್ಲ, ಭಾಗ್ಯವಂತರ ಮದುವೆಗಳು. ಇಂತಹ ವಿವಾಹ ಕಾರ‍್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿದ್ದು ದುಂದುವೆಚ್ಚ, ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.

ಸಾಮೂಹಿಕ ವಿವಾಹ ಬಡವರ ಮದುವೆ ಎಂದು ಭಾವಿಸುವುದು ತಪ್ಪು. ಸಹಸ್ರಾರು ಜನರ, ಭಕ್ತರ, ಮಠಾಧೀಶರ ಆಶೀರ್ವಾದದೊಂದಿಗೆ ಬಂಧನಕ್ಕೊಳಗಾಗುವ ಭಾಗ್ಯ. ಜೀವನದ ಸಂಭ್ರಮದ ಕ್ಷಣವಾಗಿದೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗುಲಗಂಜಿಮಠದ ಗುರುಪಾದ ಮಹಾಸ್ವಾಮಿಗಳು ಮಾತನಾಡಿದರು.

ವೇದಿಕೆಯಲ್ಲಿ ನಿಡಗುಂದಿಕೊಪ್ಪದ ಚನ್ನಬಸವ ಮಹಾಸ್ವಾಮಿಗಳು, ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು, ಬನವಾಸಿಯ ಶಿವಲಿಂಗ ಮಹಾಸ್ವಾಮಿಗಳು ಸೇರಿದಂತೆ ಅನೇಕರು ಇದ್ದರು. ತಾಲೂಕು ಮಹರ್ಷಿ ವಾಲ್ಮೀಕಿ ಕಾರ್ಯಕ್ರಮವನ್ನು ಸಮಾಜದ ಅಧ್ಯಕ್ಷ ಬಸವರಾಜ ತಳವಾರ ನಿರೂಪಿಸಿದರು.