ಮುಂಡಗೋಡ: ಉದ್ಯಮಿ ಜಮೀರ್ ಅಹ್ಮದ ದರ್ಗಾವಾಲೆ ಎಂಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮಧ್ಯರಾತ್ರಿ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೋಟೆಲ್‌ನಲ್ಲಿ ನಡೆದಿದೆ.
ರಾತ್ರಿ ಸುಮಾರು ೧೧.೩೦ರ ವೇಳೆಯಲ್ಲಿ ಸ್ನೇಹಿತನೊಂದಿಗೆ ಹೋಟೆಲ್‌ಗೆ ಬಂದಿದ್ದ ಎನ್.ಎಂ.ಡಿ. ಖ್ಯಾತಿಯ ಉದ್ಯಮಿ ಜಮೀರ ಅಹ್ಮದ ಊಟ ಮಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ನಾಲ್ವರು ದುಷ್ಕರ್ಮಿಗಳ ತಂಡ ಈತನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕುತ್ತಿಗೆಗೆ ಕತ್ತಿಯಿಂದ ಇರಿದು ಕೊಲೆ ಮಾಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮುಂಡಗೋಡ ಪೊಲೀಸರು ಆತನನ್ನು ಆ್ಯಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು. ಪಟ್ಟಣದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು.
ಕಳೆದ ವರ್ಷ ಇದೇ ಜಮೀರ ಅಹ್ಮದನನ್ನು ಕೆಲವರು ಕಾರಿನಲ್ಲಿ ಅಪಹರಿಸಿದ್ದರು. ಆ ಸಂದರ್ಭದಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಎಚ್ಚೆತ್ತುಕೊಂಡ ಅಪಹರಣಕಾರರು, ಈತನನ್ನು ಮಧ್ಯದಾರಿಯಲ್ಲಿಯೇ ಬಿಟ್ಟು ಹೋಗಿದ್ದರು. ಬಳಿಕ ಅಪಹರಣಕಾರರನ್ನು ಬಂಧಿಸಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಶನಿವಾರ ಬೆಳಗ್ಗೆ ಮುಂಡಗೋಡ ನಗರಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ಮೃತಪಟ್ಟ ವ್ಯಕ್ತಿಯ ಮೇಲೆ ಕೂಡ ರೌಡಿ ಶೀಟರ್ ಸೇರಿದಂತೆ ಸುಮಾರು ೫ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಸೆರೆಹಿಡಿಯಲು ೩ ಪೊಲೀಸ್ ತಂಡ ರಚಿಸಲಾಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ದೀಪನ್ ಹೇಳಿದರು.
ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ, ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಮಂಜುನಾಥ ಗೌಡರ ಉಪಸ್ಥಿತರಿದ್ದರು.