ಕನ್ನಡಪ್ರಭ ವಾರ್ತೆ ನಾಗಮಂಗಲ
ಕೃಷಿ ಆಧಾರಿತ ಭಾರತಕ್ಕೆ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಕೊಡುಗೆ ಅಪಾರ. 4 ದಶಕಗಳ ಕಾಲ ಸಂಸದರಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ಜೊತೆಗೆ ರೈತರು, ಶೋಷಿತರು ಮತ್ತು ತುಳಿತಕ್ಕೊಳಗಾದ ಸಮುದಾಯದ ಪರ ತಮ್ಮ ವಿದ್ಯಾರ್ಥಿ ದಿಸೆಯಿಂದಲೂ ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಅಶೋಕ್ ಹೇಳಿದರು.ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 40ನೇ ಸಂಸ್ಮರಣೋತ್ಸವದಲ್ಲಿ ಮಾತನಾಡಿದರು.
ಡಾ.ಬಾಬು ಜಗಜೀವನ್ ರಾಮ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ವರ್ಗಗಳ ಬಡಜನರ ಆಶಾಕಿರಣವಾಗಿ ರಾಷ್ಟ್ರದಲ್ಲಿ ಹಸಿರು ಕ್ರಾಂತಿ ಮೂಡಿಸಿದವರು. ಇಂತಹ ಮಹಾನ್ ವ್ಯಕ್ತಿಯ ತತ್ವ, ಆದರ್ಶ ಮತ್ತು ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ ಮಾತನಾಡಿ, ತಂದೆ ಮಾರ್ಗದರ್ಶನದಂತೆ ಬಾಲ್ಯದಲ್ಲಿಯೇ ಸ್ವಾಭಿಮಾನ, ಸತ್ಯ, ನ್ಯಾಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದ ಡಾ.ಬಾಬು ಜಗಜೀವನ್ ರಾಮ್ ಅವರು ಇತರೆ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಾಥಮಿಕ ಶಾಲಾ ಹಂತದಲ್ಲಿಯೇ ತಮ್ಮ ವಿದ್ಯಾರ್ಥಿ ವೇತನವನ್ನು ತಿರಸ್ಕರಿಸಿದ್ದರು. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ನಡೆಸಿದ್ದ ಅವರು, ದೇಶದ ಇತಿಹಾಸದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ ಎಂದರು.
ಡಾ.ಬಾಬು ಜಗಜೀವನ್ ರಾಮ್ ಅವರಲ್ಲಿದ್ದ ಸತ್ಯ ನಿಷ್ಟೆ ಪ್ರಾಮಾಣಿಕತೆ ಮತ್ತು ಸಮಾಜಿಕ ನ್ಯಾಯದಿಂದಾಗಿ ಸುಧೀರ್ಘವಾಗಿ 40 ವರ್ಷಗಳ ಕಾಲ ಒಂದೇ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ವಿಶ್ವದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು.
ಜವಹರ್‌ಲಾಲ್ ನೆಹರು ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಅವಧಿಯಲ್ಲಿ ಕನಿಷ್ಠ ಕೂಲಿ ಕಾಯ್ದೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಭವಿಷ್ಯ ನಿಧಿಯನ್ನು ಜಾರಿಗೆ ತಂದರು. ಅಲ್ಲದೆ ದೇಶಕ್ಕೆ ಅದ್ಬುತವಾಗಿ ಕೃಷಿ ನೀತಿಯನ್ನು ಜಾರಿಗೆ ತಂದು ಹಸಿರು ಕ್ರಾಂತಿಯ ಹರಿಕಾರರಾದರು. ಅಂತಹ ಮಹಾನ್ ವ್ಯಕ್ತಿಯನ್ನು ಪ್ರತಿನಿತ್ಯ ಸ್ಮರಿಸಬೇಕು ಎಂದರು.
ಈ ವೇಳೆ ದಸಂಸ ಮುಖಂಡ ಮಂಜುನಾಥ್ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ತಾಪಂ ಯೋಜನಾಧಿಕಾರಿ ಸಂದೀಪ್, ಸಿಡಿಪಿಒ ಕಚೇರಿಯ ಹರಿಪ್ರಸಾದ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್, ದಸಂಸ ಮುಖಂಡರಾದ ಕಂಚಿನಕೋಟೆ ಮೂರ್ತಿ, ನಂಜುಂಡಪ್ಪ, ಮಹೇಶ್, ಚಂದ್ರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.