ಪಾಂಡವಪುರ:

ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾ ಮಂಡಳ ನಿಯಮಿತಕ್ಕೆ ರಾಜ್ಯ ಉಪಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಆರ್.ಎ.ನಾಗಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿರುವ ಆರ್.ಎ.ನಾಗಣ್ಣ ಅವರು ರಾಜ್ಯದಲ್ಲಿ ಇರುವ ಎಲ್ಲಾ ಅಣೆಕಟ್ಟೆಗಳ ಯೋಜನಾ ಮಹಾ ಮಂಡಳಿಗಳ ನಿರ್ದೇಶಕರ ಪರವಾಗಿ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳ ನಿಯಮಿತದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಅಣೆಕಟ್ಟೆಗಳ ಯೋಜನಾ ಮಹಾ ಮಂಡಳಿಗಳ ಪರವಾಗಿ 15 ಮಂದಿ ನಿರ್ದೇಶಕರಿದ್ದು, ಇವರ ಸಹಕಾರದಿಂದ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳದ ರಾಜ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ ಎಂದರು.

ರಾಜ್ಯದ ನೀರಾವರಿ ಸಚಿವರು ಇದರ ಅಧ್ಯಕ್ಷರಾಗಿದ್ದು, ಉಳಿದಂತೆ ಸಣ್ಣ ನೀರಾವರಿ ಸಚಿವರು, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ, ಸಹಕಾರ ಇಲಾಖೆಯ ಅಪರ ನಿಬಂಧಕರು, ಎಲ್ಲಾ ಕಾಡಾದಿಂದ ಒಬ್ಬ ಪ್ರತಿನಿಧಿ, ಓರ್ವ ನೀರಾವರಿ ತಜ್ಞರು ಇದರ ಸರ್ಕಾರದ ಪರವಾಗಿ ನಿರ್ದೇಶಕರಾಗಿರುತ್ತಾರೆ. ಉಳಿದಂತೆ ಎಲ್ಲಾ ಅಣೆಕಟ್ಟೆಗಳ ಯೋಜನಾ ಮಹಾಮಂಡಳಿಂದ 15 ಮಂದಿ ನಿರ್ದೇಶಕರಿದ್ದು, ಒಟ್ಟು 21 ಮಂದಿ ರಾಜ್ಯಮಟ್ಟದ ಶೃಂಗ ಮಹಾ ಮಂಡಳದ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ ಎಂದರು.


ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸೂಚನೆಯಂತೆ ರಾಜ್ಯಮಟ್ಟದ ಶೃಂಗ ಮಹಾಮಂಡಳ ರಚನೆಯಾಗಿದ್ದು, ಇದು ಅಣೆಕಟ್ಟೆಗಳ ಸಂರಕ್ಷಣೆ, ನೀರಾವರಿ ಪ್ರಗತಿಯ ಪರವಾಗಿ ಕೆಲಸ ಮಾಡಲಿದೆ. ರಾಜ್ಯ ಮಟ್ಟದ ಶೃಂಗ ಮಹಾಮಂಡಳಕ್ಕೆ ರಾಜ್ಯ ಉಪಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಲ್ಲಾ ಅಣೆಕಟ್ಟೆಗಳ ಯೋಜನಾ ಮಹಾಮಂಡಳದ ನಿರ್ದೇಶಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.