ಕನ್ನಡಪ್ರಭ ವಾರ್ತೆ ಸಕಲೇಶಪುರ

ಅತಿವೃಷ್ಟಿಯಿಂದ ಅನಾಹುತಕ್ಕೆ ಒಳಗಾಗುವವರಿಗೆ ತ್ವರಿತವಾಗಿ ಪರಿಹಾರ ನೀಡಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಶ್ರೇಯಸ್‌ ಪಟೇಲ್ ಹೇಳಿದರು.

ಸೋಮವಾರ ಪಟ್ಟಣದ ಅರೇಹಳ್ಳಿ ಬೀದಿ ಸಮೀಪ ತಡೆಗೋಡೆ ಕುಸಿದು ಹಾನಿಗೊಂಡಿದ್ದ ಮನೆಗಳನ್ನು ವೀಕ್ಷಣೆ ನಡೆಸಿ ಮಾತನಾಡಿ, ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸುವುದು ಸಾಮಾನ್ಯವಾಗಿದೆ. ಆದರೆ, ಇಲ್ಲಿ ಸಂಭವಿಸಿರುವ ತಡೆಗೋಡೆ ಕುಸಿತ ಮಾನವ ನಿರ್ಮಿತವಾಗಿದ್ದು ತಾಲೂಕು ಆಡಳಿತ ಸಮಗ್ರವಾಗಿ ಪರಿಶೀಲನೆ ನಡೆಸಿ ತಪ್ಪಿತಸ್ಥರಿಂದ ಪರಿಹಾರ ಒದಗಿಸಬೇಕು. ಹಾನಿಗೊಳಗಾಗಿರುವ ಕುಟುಂಬಗಳಿಗೆ ಅಗತ್ಯವಿದ್ದರೆ ವಾಸ್ತವ್ಯ ಕಲ್ಪಿಸಬೇಕು. ಇದಲ್ಲದೆ ಮಳೆಗಾಲ ಮುಕ್ತಾಯಗೊಳ್ಳುವವರೆಗೂ ಆಯಕಟ್ಟಿನ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ತೆರಳಬಾರದು. ಹಾನಿಗೊಳಗಾದ ಪ್ರದೇಶಗಳನ್ನು ತುರ್ತಾಗಿ ದುರಸ್ತಿ ಪಡಿಸುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳ ಬೇಕು ಎಂದರು.

ಈ ವೇಳೆ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್, ಉಪವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ, ತಹಸೀಲ್ದಾರ್‌ ಸುಪ್ರೀತಾ, ಇಒ ಗಂಗಾಧರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.