ಡಾ. ಹಿತ್ತಲಮನಿಗೆ ರಾಜ್ಯೋತ್ಸವ ಗರಿ

| Published : Oct 31 2025, 02:30 AM IST

ಸಾರಾಂಶ

ಜಿಲ್ಲೆಯ ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಮೂಲದವರಾದ, ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕರಾದ ಡಾ. ಎಸ್.ವಿ.ಹಿತ್ತಲಮನಿ ಅವರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೃಷಿ ವಿಭಾಗದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಹಾವೇರಿ:ಜಿಲ್ಲೆಯ ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಮೂಲದವರಾದ, ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕರಾದ ಡಾ. ಎಸ್.ವಿ.ಹಿತ್ತಲಮನಿ ಅವರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೃಷಿ ವಿಭಾಗದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಬೆಂಗಳೂರಲ್ಲಿ 1976 ತೋಟಗಾರಿಕೆ ಇಲಾಖೆಯಲ್ಲಿ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸೇವೆಗೆ ಹಾಜರಾದ ಹಿತ್ತಲಮನಿ, ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಅಪರ ನಿರ್ದೇಶಕರಾಗಿ 2013ರಲ್ಲಿ ನಿವೃತ್ತರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ನಿವೃತ್ತಿ ಬಳಿಕ 12 ವರ್ಷಗಳಿಂದ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೇಗೆ ತೋಟಗಾರಿಕೆ ಕೃಷಿಯನ್ನು ಲಾಭದಾಯಕ ಮಾಡಬಹುದು ಎಂದು ರಾಜ್ಯಾದ್ಯಂತ ಸುತ್ತುತ್ತಾ ರೈತರಿಗೆ ಉಪಯುಕ್ತ ಸಲಹೆ ನೀಡುತ್ತಿದ್ದಾರೆ. ಕಡಿಮೆ ಮಳೆ ಇರುವ ಪ್ರದೇಶದಲ್ಲಿ ಯಾವ ಬೆಳೆ ಸೂಕ್ತ ಎಂಬಿತ್ಯಾದಿ ವಿಷಯಗಳ ಕುರಿತು ಸಂಶೋಧನೆ, ಅಧ್ಯಯನ ಮಾಡುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಇವರ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗಿನಿಂದ ಈವರೆಗೆ ಡಾ.ಹಿತ್ತಲಮನಿ ಅವರು ರೈತರಿಗೆ ಉಚಿತವಾಗಿ ಸಲಹೆ, ಮಾರ್ಗದರ್ಶನ, ತರಬೇತಿ ನೀಡುತ್ತ ಬಂದಿದ್ದಾರೆ. ತೋಟಗಾರಿಕೆ ಬೆಳೆಗಳಲ್ಲಿ ಹೊಸ ಹೊಸ ತಳಿಗಳನ್ನು ಸಂಶೋಧಿಸಿ ಅದಕ್ಕೆ ಹೆಸರು ಸೂಚಿಸಿ, ರೈತರಿಗೆ ನೆರವಾಗಿದ್ದಾರೆ. ನೇರಳೆ, ಚಕ್ಕೋತ, ಪಪ್ಪಾಯ, ಮಾವು, ಹಲಸು, ಇತರ ಹಣ್ಣುಗಳ ಹೊಸ ತಳಿಗಳ ಸಂಶೋಧನೆ ಮಾಡುವ ಮೂಲಕ ರೈತರಿಗೆ ಹೆಚ್ಚು ಇಳುವರಿ ನೀಡುವ, ಆರ್ಥಿಕವಾಗಿ ಸಹಕಾರಿಯಾಗುವ ಕೆಲಸಗಳನ್ನು ಮಾಡಿದ್ದಾರೆ.

ರೈತರ ತೋಟದಲ್ಲಿ ಹೋಗಿ ಪ್ರಾಯೋಗಿಕವಾಗಿ ತರಬೇತಿ ನೀಡುವ ಮೂಲಕ ತೋಟಗಾರಿಕೆ ಬೆಳೆಗಳ ಕುರಿತು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಕೃಷಿಯಲ್ಲಿ ಸಂರಕ್ಷಣಾ ತಂತ್ರಗಳ ಅಳವಡಿಕೆ, ಸಾವಯವ ಕೃಷಿ, ತಂತ್ರಜ್ಞಾನ ಬಳಕೆ, ಇತರ ಅಂಶಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.ಸೇವೆಯಲ್ಲಿದ್ದಾಗ ಹಾಗೂ ನಿವೃತ್ತಿಯಾದ ಮೇಲೂ ನಾನು ರೈತರಿಗಾಗಿಯೇ ಸಮಯ ಮೀಸಲಿಟ್ಟಿದ್ದೇನೆ. ರಾಜ್ಯಾದ್ಯಂತ ರೈತರಿಗೆ ಅಗತ್ಯ ಸಲಹೆಗಳನ್ನು ನೀಡುತ್ತ ಬಂದಿದ್ದೇನೆ. ರೈತರು ಹೆಚ್ಚು ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂಬ ಆಶಯ ನನ್ನದಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ.ಎಸ್‌.ವಿ. ಹಿತ್ತಲಮನಿ ಹೇಳಿದರು.