ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿಯೊಬ್ಬರಿಗೆ ಸಹಾಯ ಮಾಡುವ ಅಭ್ಯಾಸ ನಮ್ಮ ಜಗತ್ತನ್ನು ಸುಂದರ ಮತ್ತು ಶಾಂತಿಯ ಸ್ಥಳವನ್ನಾಗಿ ಮಾಡಬಲ್ಲದು ಎಂದು ಶಾಸಕ ವಿಠ್ಠಲ ಕಟಕಧೊಂಡ ಅಭಿಪ್ರಾಯಪಟ್ಟರು.ನಗರದ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಚರಿಸಲಾದ ಆರ್ಟ್ ಆಫ್ ಗಿವಿಂಗ್ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಮ್ಮ ಕೈಲಾದಷ್ಟು ಸಹಾಯವನ್ನು ಇತರರಿಗೆ ಮಾಡಲು ಸಂಕಲ್ಪ ಮಾಡಿ, ನಮ್ಮ ಜೀವನದಲ್ಲಿ ನಾವು ಪಡೆದ ಆಶೀರ್ವಾದಗಳು ಮತ್ತು ಯಶಸ್ಸನ್ನು ಸಮಾಜದೊಂದಿಗೆ ಹಂಚಿಕೊಳ್ಳೋಣ ಎಂದರು.
ಮಾನವೀಯತೆಗೆ ಸೇವೆ ಸಲ್ಲಿಸುವುದು ವಿಶ್ವದ ಭಕ್ತಿಯ ಶ್ರೇಷ್ಠ ರೂಪವಾಗಿದೆ. ಆರ್ಟ್ ಆಫ್ ಗಿವಿಂಗ್ ಆಂದೋಲನದ ಮೂಲಕ ಮಾನವೀಯ ಮತ್ತು ನಿಸ್ವಾರ್ಥ ಸೇವೆಯ ಉದಾತ್ತ ಧ್ಯೇಯವನ್ನು ಪ್ರಪಂಚದಾದ್ಯಂತ ಹರಡಿದ ಡಾ.ಅಚ್ಯುತ ಸಮಂತ ಅವರನ್ನು ಶ್ಲಾಘಿಸಿದರು.ಆರ್ಟ್ ಆಫ್ ಗಿವಿಂಗ್‌ದ ಕರ್ನಾಟಕ ರಾಜ್ಯ ಯುವ ಸಂಚಾಲಕಿ ಶಿಫಾ ಜಮಾದಾರ ಮಾತನಾಡಿ, ಜಗತ್ತು ತೆಗೆದುಕೊಳ್ಳುವ ಕಲೆಯಲ್ಲಿ ನಿರತವಾಗಿದ್ದರೂ, ಕೆಲವೇ ಜನರು ಕೊಡುವ ಕಲೆಯನ್ನು ನಿಜವಾಗಿಯೂ ಅಭ್ಯಾಸ ಮಾಡುತ್ತಾರೆ. ಒಳ್ಳೆಯ ಕಾರ್ಯಗಳ ಮೂಲಕ ಒಬ್ಬರ ಹೃದಯ ಮತ್ತು ಆತ್ಮವನ್ನು ಬೆಳಗಿಸುವ ದಯೆ ಮತ್ತು ನಿಸ್ವಾರ್ಥತೆಯ ಕ್ರಿಯೆಗಳನ್ನು ಒಳಗೊಂಡಿದೆ ಎಂದರು.
ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯ ಕೋರಿಶೆಟ್ಟಿ ಮಾತನಾಡಿ, ಮಾನವೀಯತೆಗೆ ಮಾಡುವ ಪ್ರತಿಯೊಂದು ಸೇವೆಯೂ ಕೊಡುವ ಕಲೆಯ ಒಂದು ರೂಪವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿಸ್ವಾರ್ಥತೆ, ಕೃತಜ್ಞತೆ ಮತ್ತು ದಯೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ, ಐಟಿಎಸ್ ಅಧಿಕಾರಿ ಇಶಿತಾ ಗುಪ್ತಾ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ ಜಮಾದಾರ ಮಾತನಾಡಿದರು.
ಪ್ರೊ.ನಾಮದೇವಗೌಡ, ಪ್ರೊ.ಚಿಂತಾಮಣಿ, ಡಾ.ದೀಪಕ ಶಿಂಧೆ, ಡಾ.ಪ್ರಜಾಪತಿ, ಡಾ.ಗುಲಾಬ ರಾಠೋಡ, ಡಾ.ಶೀತಲರಾಣಿ ಕಾವಳೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ವಿವಿ ಎನ್.ಎಸ್.ಎಸ್ ಸಮನ್ವಯಾಧಿಕಾರಿ ಡಾ.ಪ್ರಕಾಶ ಸನ್ನಕ್ಕನವರ ಸ್ವಾಗತಿಸಿದರು. ಕು.ನಂದಿನಿ ವಂದಿಸಿದರು.