ಕಳಪೆ ಕಾಮಗಾರಿ ಸಹಿಸೋದಿಲ್ಲ

| Published : Oct 31 2025, 02:15 AM IST

ಸಾರಾಂಶ

ಯಾವುದೇ ಕೆಲಸವಾಗಲಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಮುಗಿಸಿದ ಬಳಿಕ ಪರಿಶೀಲನೆ ಮಾಡಲಾಗುವುದು. ಕಳಪೆ ಕಂಡುಬಂದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು. ಹೊಸ ರಸ್ತೆ ಕಟ್ಟಿಂಗ್ ಮಾಡಿದವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದ್ದಾರೆ.

- ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್‌. ಬಸವಂತಪ್ಪ ಎಚ್ಚರಿಕೆ

- ರಾಮಗೊಂಡನಹಳ್ಳಿಯಲ್ಲಿ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾವುದೇ ಕೆಲಸವಾಗಲಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಮುಗಿಸಿದ ಬಳಿಕ ಪರಿಶೀಲನೆ ಮಾಡಲಾಗುವುದು. ಕಳಪೆ ಕಂಡುಬಂದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು. ಹೊಸ ರಸ್ತೆ ಕಟ್ಟಿಂಗ್ ಮಾಡಿದವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ರಾಮಗೊಂಡನಹಳ್ಳಿಯಲ್ಲಿ ಗುರುವಾರ ₹2 ಕೋಟಿ ವೆಚ್ಚದಲ್ಲಿ ಕೊಡಗನೂರು- ಕಬ್ಬೂರು-ರಾಮಗೊಂಡನಹಳ್ಳಿ- ಕಾಶಿಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವ ಪೂರ್ವದಲ್ಲಿಯೇ ಕುಡಿಯುವ ನೀರಿನ ಪೈಪ್, ಕೇಬಲ್ ಅಳವಡಿಕೆ ಸೇರಿದಂತೆ ಇತರೆ ವ್ಯವಸ್ಥೆ ಮಾಡಿಕೊಳ್ಳಬೇಕು. ರಸ್ತೆ ಅಭಿವೃದ್ಧಿ ಮಾಡಿದ ಬಳಿಕ ರಾತ್ರಿಯ ವೇಳೆ ಪೈಪ್‌ಲೈನ್ ಹಾಕಲು ಹೊಸ ರಸ್ತೆ ಕಟ್ಟಿಂಗ್ ಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಏಕೆಂದರೆ ಅಕ್ರಮವಾಗಿ ರಸ್ತೆ ಕಟಿಂಗ್‌ನಂಥ ಅನೇಕ ಘಟನೆಗಳು ನಡೆದಿವೆ, ಮುಂದೆಯೂ ನಡೆಯಬಹುದು. ಆದ್ದರಿಂದ ಯಾರು ಹೊಸ ರಸ್ತೆಗಳಲ್ಲಿ ಗುಂಡಿ ಮಾಡುತ್ತಾರೆಯೋ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.

ವಿಶೇಷ ಅನುದಾನದಡಿ ಕ್ಷೇತ್ರದ ಜನರ ಬೇಡಿಕೆಯಂತೆ ಬಹುತೇಕ ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಭಾವಿಹಾಳ್, ಕೊಡಗನೂರು, ಶ್ಯಾಗಲೆ, ಲೋಕಿಕೆರೆ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಹಾಳಾಗಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಕ್ಷೇತ್ರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಸರ್ಕಾರದಿಂದ ಅನುದಾನ ತಂದು ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಾಯಕೊಂಡ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರರ ಮೇಲಿದೆ. ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು. ಜನರಿಗೆ ಅನುಕೂಲ ಆಗುವಂತೆ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೊಂಡು ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಕುಮಾರ್ ನಾಯ್ಕ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಜಾ, ಮುಖಂಡರಾದ ಮರಳುಸಿದ್ದಪ್ಪ, ಬಸವರಾಜಪ್ಪ, ಮಲ್ಲಿಕಾರ್ಜುನ್, ಶರಣಪ್ಪ, ರಂಗನಾಥ್, ಕೋಟೆಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- - -

(ಕೋಟ್) ಒಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಕನಿಷ್ಠ 20 ವರ್ಷ ಬಾಳಿಕೆ ಬರಬೇಕು. ಗುಣಮಟ್ಟದ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಮಾತ್ರ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ಬರುತ್ತದೆ. ಈ ನಿಟ್ಟಿನಲ್ಲಿ ಗುಣಮಟ್ಟ ಕಾಮಗಾರಿಗೆ ಗುತ್ತಿಗೆದಾರರು ಒತ್ತು ನೀಡಬೇಕು.

- ಕೆ.ಎಸ್.ಬಸವಂತಪ್ಪ, ಶಾಸಕ.

- - -

-30ಕೆಡಿವಿಜಿ31, 32:

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ರಾಮಗೊಂಡನಹಳ್ಳಿಯಲ್ಲಿ ₹2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.