ದಾಬಸ್‍ಪೇಟೆ: ಕನ್ನಡ ನಾಡಿನ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ಅನನ್ಯ ಸ್ಥಾನವಿದೆ. ಈ ವಚನ ಸಾಹಿತ್ಯ ಎಂಬ ಜ್ಞಾನದ ಭಂಡಾರವನ್ನು ಕಾಲದ ಗರ್ಭದಿಂದ ಹೊರತೆಗೆದು,ಇಂದಿನ ಆಧುನಿಕ ಸಮಾಜಕ್ಕೆ ಉಣಬಡಿಸಿದ ಕೀರ್ತಿ ವಚನ ಪಿತಾಮಹ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಫ.ಗು.ಹಳಕಟ್ಟಿ) ಅವರಿಗೆ ಸಲ್ಲುತ್ತದೆ ಎಂದು ಕಂಚುಗಲ್ ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ತಿಳಿಸಿದರು.

ಸೋಂಪುರ ಹೋಬಳಿಯ ಕೆರೆಕತ್ತಿಗನೂರಿನ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ ಸಮಾಧಾನ ಮಠದಲ್ಲಿ ಫ.ಗು.ಹಳಕಟ್ಟಿರವರ ಜನ್ಮ ದಿನಾಚರಣೆ ಮತ್ತು ಗುರುಪೂರ್ಣಿಮೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಫ.ಗು.ಹಳಕಟ್ಟಿರವರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ವಚನ ಸಾಹಿತ್ಯದ ಪುನರುತ್ಥಾನಕ್ಕಾಗಿ ಶ್ರಮಿಸಿದ ಒಂದು ಚಲಿಸುವ ವಿಶ್ವವಿದ್ಯಾಲಯವಾಗಿದ್ದರು. 12ನೇ ಶತಮಾನದ ಬಸವಾದಿ ಶರಣರ ವಚನಗಳು ಕರಪತ್ರಗಳು, ತಾಳೆಗರಿಗಳ ರೂಪದಲ್ಲಿ ಮೂಲೆ ಸೇರಿದ್ದ ಕಾಲವದು. ಹಳಕಟ್ಟಿಯವರು ತಮ್ಮ ವಕೀಲಿ ವೃತ್ತಿಯ ಪಕ್ಕಕ್ಕಿಟ್ಟು, ಹಳ್ಳಿ-ಹಳ್ಳಿಗಳಿಗೆ ಅಲೆದಾಡಿ, ಧೂಳು ಹಿಡಿದಿದ್ದ ತಾಳೆಗರಿಗಳನ್ನು ಸಂಗ್ರಹಿಸಿದರು. ತನ್ಮೂಲಕ ವಚನ ಸಾಹಿತ್ಯ ಕಣ್ಮರೆಯಾಗದಂತೆ ಉಳಿಸಿದರು ಎಂದರು.

ಸಮಾಧಾನ ಮಠದ ಉಸ್ತುವಾರಿ ಮಹೇಶ್ ಮಾತನಾಡಿ, ಹಳಕಟ್ಟಿರವರು ವಚನಗಳನ್ನು ಮುದ್ರಿಸಿ ಜನರಿಗೆ ತಲುಪಿಸಲು ಅವರು ತಮ್ಮ ಸ್ವಂತ ಮನೆ, ಆಸ್ತಿಯನ್ನು ಮಾರಿದ ಮಹಾತ್ಮರು. ಆರ್ಥಿಕ ಸಂಕಷ್ಟದ ನಡುವೆಯೂ ‘ಹಿತೈಷಿ’ ಮುದ್ರಣಾಲಯ ಸ್ಥಾಪಿಸಿ, ಶರಣರ ವಚನ ಸಂಪುಟಗಳನ್ನು ಪ್ರಕಟಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.

ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಗೋವಿಂದಯ್ಯ ಮಾತನಾಡಿ, ಹಳಕಟ್ಟಿಯವರು ಶರಣರ ತತ್ವ ಪ್ರಸಾರಕ್ಕಾಗಿ ‘ಶಿವಾನುಭವ’ ಎಂಬ ಸಂಶೋಧನಾತ್ಮಕ ಪತ್ರಿಕೆಯನ್ನು ದಶಕಗಳ ಕಾಲ ಯಶಸ್ವಿಯಾಗಿ ನಡೆಸಿ ಸಮಾಜದ ಏಳಿಗೆಗೆ ಬೇಳಕು ನೀಡಿದ ಧೀಮಂತರು ಎಂದು ಹೇಳಿದರು.

ಶ್ರೀಮಠದ ಹಿರಿಯ ಭಕ್ತ ನಾಗರಾಜ ಕೋರಿಶೆಟ್ಟಿ ಮಾತನಾಡಿ, ಜುಲೈ ತಿಂಗಳು 29ರಂದು ಸಮಾಧಾನ ಮಠದಲ್ಲಿ ಗುರುಗಳ ಅಪ್ಪಣೆ ಮೇರೆಗೆ ಅರ್ಥಪೂರ್ಣ ಗುರುಪೂರ್ಣಿಮೆಯನ್ನು ಸಂಕಲ್ಪ ದೀಪೋತ್ಸವದ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು ಶ್ರೀಮಠದ ಗುರು ಬಂಧುಗಳು ಮತ್ತು ಸುತ್ತಮತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಹಿರಿಯ ಗುರು ಬಂಧುಗಳಾದ ಸುಧಾಮಣಿ, ತಾರಾನಾಥ, ಪ್ರಕಾಶ್ ಕರ್ನಾಟಕ ನವನಿರ್ಮಾಣ ಸಂಘಟನೆಯ ತಾಲೂಕಾಧ್ಯಕ್ಷ ನಾರಾಯಣಸ್ವಾಮಿ, ಭಕ್ತರಾದ ಲಿಂಗಣ್ಣ ಶೀಲಿ, ವೀರೇಂದ್ರ ಶೆಟ್ಟಿ, ಸಂತೋಷ್ ಹೊನ್ನಶೆಟ್ಟಿ, ಮಹಾಂತೇಶ ಹಿಟ್ನಳ್ಳಿ, ಶೃತಿ ಮಹೇಶ್, ಮಾಯಾಶೀಲಿ, ಶ್ರೀಮಠದ ಮಾಧ್ಯಮ ಸಂಯೋಜಕರಾದ ಗಂಗಾಧರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.ಪೋಟೋ 5 :

ಸೋಂಪುರ ಹೋಬಳಿಯ ಕೆರೆಕತ್ತಿಗನೂರಿನ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ ಸಮಾಧಾನ ಮಠದಲ್ಲಿ ಫ.ಗು.ಹಳಕಟ್ಟಿಯವರ ಜನ್ಮೋತ್ಸವ ಮತ್ತು ಗುರುಪೂರ್ಣಿಮೆ ಪೂರ್ವಭಾವಿ ಸಭೆಯಲ್ಲಿ ಕಂಚುಗಲ್ ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿದರು.