ಕನ್ನಡಪ್ರಭ ವಾರ್ತೆ ಮುಧೋಳ
ಪುಸ್ತಕದ ಮೌಲ್ಯ ಮತ್ತು ಸಾರ್ಥಕ್ಯತೆ ಪಡೆಯಬೇಕಾದರೆ ಗ್ರಂಥಾಲಯಗಳು ಅವಶ್ಯ ಹಾಗೂ ಗ್ರಂಥಪಾಲಕನ ಪಾತ್ರ ಆತೀ ಮಹತ್ವದ್ದಾಗಿದೆ ಎಂದು ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ ಹೇಳಿದರು.ಬಾಗಲಕೋಟ ಬಿವಿವಿ ಸಂಘದ ನಗರದ ಎಸ್ ಆರ್ ಕಂಠಿ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಬುಧವಾರ ಭಾರತೀಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹ ಡಾ.ಎಸ್ ಆರ್ ರಂಗನಾಥನ್ ಅವರ 134ನೇ ಜನ್ಮದಿನದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮತ್ತು ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು.
ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ, ಇದರಲ್ಲಿ ಗ್ರಂಥಪಾಲಕರ ಶ್ರಮ ಬಹಳವಿದೆ, ಓದುಗನಿಗೆ ಜ್ಞಾನದ ಊಟವನ್ನು ಊಣಬಡಿಸಲು ಸದಾ ಸಿದ್ದನಾಗಿರುತ್ತಾನೆ ಎಂದರು.ಇದೆ ವೇಳೆ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಿಂದ ಪುಸ್ತಕ ಪ್ರದರ್ಶನ, ಆನಲೈನ್ ಕ್ವೀಜ್ ಏರ್ಪಡಿಸಲಾಗಿತ್ತು. ಪ್ರೊ.ಪಿ.ಡಿ.ಕುಂಬಾರ ಅವರು ತಮ್ಮ ಜನ್ಮ ದಿನದ ಅಂಗವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಐಕ್ಯೂಎಸಿ ಸಂಯೋಜಕ ಅಜ್ಜಪ್ಪ ಕಡೂರು, ಗ್ರಂಥಾಲಯ ಸಲಹಾ ಸಮಿತಿಯ ಅಧ್ಯಕ್ಷೆ ಶಾರದಾ ಬಿರಾದಾರ, ಗ್ರಂಥಪಾಲಕ ಡಾ.ಚಿರಂಜೀವಿ ಎಲ್.ಎಂ, ಗ್ರಂಥಾಲಯದ ಸಲಹಾ ಸಮಿತಿ ಸದಸ್ಯರಾದ ಡಾ.ಎಂ.ಎನ್.ಪಾಟೀಲ, ಕಿರಣ ಮಾಲಾಪುರ, ವಿಜಯಲಕ್ಷ್ಮೀ ಬಸರಡ್ಡಿ, ಬಿ.ಎಲ್.ಲಿಂಗರಡ್ಡಿ, ದುಂಡಪ್ಪ ಇಂಗಳಗಿ, ಶೀಲಾ ಮೇಟಿ, ಗ್ರಂಥಾಲಯದ ಸಹಾಯಕ ಬಿ.ವಿ.ಪೂಜಾರಿ, ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು, ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯದ ಸೇವೆಯಿಂದ, ಪ್ರತಿಯೊಂದು ಜೀವಿಗೂ ಬದುಕಲು ನೀರು, ಗಾಳಿ, ಬೆಳಕು ಮತ್ತು ಆಹಾರ ಹೇಗೆ ಮುಖ್ಯವೋ ಹಾಗೆಯೇ ಮನುಷ್ಯ ಮನುಷ್ಯತ್ವದಿಂದ ನಡೆದುಕೊಳ್ಳಲು ಮಾನವೀಯ ಮೌಲ್ಯಗಳನ್ನು ಬೆಳಸಿಕಬೇಕೆಂದರೆ ಮನುಷ್ಯನ ವ್ಯಕ್ತಿತ್ವವನ್ನೇ ಬದಲಿಸಬೇಕೆಂದರೆ ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರೆ ಪುಸ್ತಕಗಳಿಂದ ಮಾತ್ರ ಸಾಧ್ಯ.
-ಡಾ.ಮಲ್ಲಿಕಾರ್ಜುನ ಜರಕುಂಟಿ, ಪ್ರಾಚಾರ್ಯ