ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸುವ ವಿಷಯ ತಿಂಗಳಿಂದ ನನೆಗುದಿಗೆ ಬಿದ್ದಿರುವುದಕ್ಕೆ ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳ ಮುಖಂಡರು ಬುಧವಾರ ಪಾಲಿಕೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಆಯುಕ್ತರು ಮತ್ತು ಹೋರಾಟಗಾರರ ನಡುವೆ ಕೆಲಕಾಲ ಬಿರುಸಿನ ಮಾತಿನ ಚಕಮಕಿಯೂ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸುವ ವಿಷಯ ತಿಂಗಳಿಂದ ನನೆಗುದಿಗೆ ಬಿದ್ದಿರುವುದಕ್ಕೆ ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳ ಮುಖಂಡರು ಬುಧವಾರ ಪಾಲಿಕೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಆಯುಕ್ತರು ಮತ್ತು ಹೋರಾಟಗಾರರ ನಡುವೆ ಕೆಲಕಾಲ ಬಿರುಸಿನ ಮಾತಿನ ಚಕಮಕಿಯೂ ನಡೆಯಿತು.

ಮೂರು ತಿಂಗಳಿಂದ ಪಾಲಿಕೆಯ ಸಾಮಾನ್ಯ ಸಭೆಯೇ ನಡೆದಿಲ್ಲ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದು ಅಧಿಕಾರಿಗಳ ಜವಾಬ್ದಾರಿಯಲ್ಲವೇ? ಸಭೆ ನಡೆಯದಿದ್ದರೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಬೇಕಾಗಿರಲಿಲ್ಲವೇ? ಸರ್ಕಾರ ನಿಮ್ಮನ್ನು ಇಲ್ಲಿ ಏಕೆ ನೇಮಿಸಿದೆ ಎಂದು ಮುಖಂಡರು ಪ್ರಶ್ನೆಗಳ ಸುರಿಮಳೆಗೈದರು.

ಗೊತ್ತುವಳಿ ಕುರಿತ ಪ್ರಕ್ರಿಯೆ ನಿರಂತರವಾಗಿ ವಿಳಂಬವಾಗುತ್ತಿರುವುದನ್ನು ಪ್ರಸ್ತಾಪಿಸಿದ ಮುಖಂಡರು, ದಿನ ಕಳೆದಂತೆ ಈ ವಿವಾದ ಹಿಮದ ಉಂಡೆಯಂತೆ ದೊಡ್ಡದಾಗುತ್ತಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸರಳವಾದ ಕರ್ನಾಟಕ ಪರ ಗೊತ್ತುವಳಿಗೆ ಇಷ್ಟೊಂದು ವಿಳಂಬ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಸಾಮಾನ್ಯ ಸಭೆ ಕರೆದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಭೆ ಕರೆಯುವುದಕ್ಕೂ ಮೊದಲು ಗೊತ್ತುವಳಿ ಕುರಿತು ಸರ್ಕಾರದಿಂದ ಸ್ಪಷ್ಟ ನಿರ್ಧಾರ ಮತ್ತು ನಿರ್ದೇಶನ ಪಡೆಯಬೇಕು. ಮತ್ತೆ ಸಭೆ ಕರೆದು ವಿಷಯವನ್ನು ಮುಂದೂಡುವ ಪ್ರಯತ್ನ ಮಾಡಬಾರದು ಎಂದು ಮುಖಂಡರು ಒತ್ತಾಯಿಸಿದರು.

ಮೂರು ತಿಂಗಳು ಕಳೆದರೂ ವಿಷಯ ಇತ್ಯರ್ಥವಾಗಿಲ್ಲ. ಜನರನ್ನು ಮತ್ತು ಹೋರಾಟಗಾರರನ್ನು ಹೀಗೆ ಕಾಯಿಸಿಡಲು ಸಾಧ್ಯವಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಎಚ್ಚರಿಸಿದರು. ಇದೆ ವೇಳೆ ಮೇಯರ್ ಮತ್ತು ಉಪಮೇಯರ್ ಅವರ ನಿಲುವಿನ ವಿರುದ್ಧವೂ ಮುಖಂಡರು ಅಸಮಾಧಾನ ಹೊರಹಾಕಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಹೇಳುವ ಗೊತ್ತುವಳಿಗೇ ಅಡ್ಡಿಪಡಿಸುವುದು ಕನ್ನಡಿಗರಿಗಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು. ಯಾರ ಒತ್ತಡಕ್ಕೆ ಅಥವಾ ಯಾರ ಕೈಗೊಂಬೆಯಾಗಿ ಇಂತಹ ನಿಲುವು ತೆಗೆದುಕೊಳ್ಳಲಾಗುತ್ತಿದೆ ಎಂಬುದೂ ಜನರಿಗೆ ಗೊತ್ತಾಗಬೇಕು ಎಂದು ಮುಖಂಡರು ಆಗ್ರಹಿಸಿದರು.

ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಮನವಿ ಸಿದ್ಧಪಡಿಸಲಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ಮತ್ತೊಮ್ಮೆ ತರಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೂ ಚರ್ಚಿಸಲಾಗುವುದು ಎಂದು ಮುಖಂಡರು ತಿಳಿಸಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿ ಅಂಗೀಕಾರಕ್ಕಾಗಿ ಹಲವು ತಿಂಗಳಿಂದ ನಡೆಯುತ್ತಿರುವ ಹೋರಾಟ ಇದೀಗ ಪಾಲಿಕೆ ಆಡಳಿತದ ನಿಷ್ಕ್ರಿಯತೆಯನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದ್ದು, ಇನ್ನಷ್ಟು ವಿಳಂಬವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಕನ್ನಡಪರ ಸಂಘಟನೆಗಳು ಸ್ಪಷ್ಟವಾಗಿ ರವಾನಿಸಿವೆ.