ಕನ್ನಡಪ್ರಭ ವಾರ್ತೆ ಸೊರಬ

ಶಿಕ್ಷಣ ಎನ್ನುವುದು ಕೇವಲ ಶಾಲೆಗೆ ಸೀಮಿತವಾಗಿದ್ದ ಕಾಲದಲ್ಲಿ, ಹಳ್ಳಿ ಹಳ್ಳಿಯ ನಾಟಕಗಳು ಜನರಿಗೆ ಬದುಕುವ ಕಲೆ ಮತ್ತು ಸಂಸ್ಕಾರವನ್ನು ಕಲಿಸುವ ಜೀವಂತ ಪಾಠಶಾಲೆಗಳಾಗಿದ್ದವು ಎಂದು ಶ್ರೀ ಮಾರಿಕಾಂಬಾ ಸಮಿತಿ ಅಧ್ಯಕ್ಷ ಹಾಗೂ ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ ಹೇಳಿದರು.

ತಾಲೂಕಿನ ಹುಲ್ತಿಕೊಪ್ಪ, ಕಡೆಗದ್ದೆ ಹಾಗೂ ಕೋಣನಮನೆ ಗ್ರಾಮಗಳ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎರಡನೇ ದಿನದ ಕಾರ್ಯಕ್ರಮದ ಸಾಂಸ್ಕೃತಿಕ ಸೌರಭ ಹಾಗೂ ಸಾಮಾಜಿಕ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಅನಕ್ಷರತೆ ಹೆಚ್ಚಿದ್ದಾಗ ಜನಸಾಮಾನ್ಯರಲ್ಲಿ ನೈತಿಕತೆ, ಧರ್ಮ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಲು ನಾಟಕಗಳೇ ಪ್ರಬಲ ಮಾಧ್ಯಮಗಳಾಗಿದ್ದವು. ರಂಗಭೂಮಿಯ ಕಲಾವಿದರು ಜೀವತುಂಬುವ ಪಾತ್ರಗಳು ಕೇವಲ ಮನರಂಜನೆಯಾಗಿರದೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬರಿಗೂ ಧಾರೆ ಎರೆಯುತ್ತಿದ್ದವು. ಇಂದಿನ ಆಧುನಿಕ ಯುಗದಲ್ಲೂ ಸಾಮಾಜಿಕ ನಾಟಕಗಳು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ನೈಜ ಕಲೆಗಳ ಮೂಲಕ ಜನರ ಮನಪರಿವರ್ತಿಸುವ ಕೆಲಸ ಮಾಡುತ್ತಿವೆ ಎಂದು ಅವರು ರಂಗಭೂಮಿಯ ಪರಂಪರೆಯನ್ನು ಶ್ಲಾಘಿಸಿದರು.

೨೦೦೩ರಲ್ಲಿ ನಡೆದ ಜಾತ್ರೆಯ ನಂತರ ಸುಮಾರು ೨೩ ವರ್ಷಗಳ ಕಾಲ ವಿವಿಧ ಕಾರಣಗಳಿಂದ ಈ ಸಂಭ್ರಮ ದೂರವಾಗಿತ್ತು. ಆದರೆ ಈ ವರ್ಷ ಗ್ರಾಮಸ್ಥರ ಒಗ್ಗಟ್ಟಿನಿಂದ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸಿ, ಪುನರ್ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಹುಲ್ತಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಕಡಗದ್ದೆ ಹಾಗೂ ಕೋಣನಮನೆ ಗ್ರಾಮಸ್ಥರ ಒಗ್ಗಟ್ಟಿನಿಂದ ಈ ಬಾರಿ ಮಾರಿಕಾಂಬಾ ಜಾತ್ರೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಗಿದೆ ಎಂದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಾರಿಕಾಂಬಾ ಸಮಿತಿ ಗೌರವಾಧ್ಯಕ್ಷರಾದ ಆರ್. ಶ್ರೀಧರ್ ಹುಲ್ತಿಕೊಪ್ಪ ನೆರವೇರಿಸಿದರು. ಈ ವೇಳೆ ಹಿರಿಯರಾದ ಸೀನಪ್ಪ, ಕಾರ್ಯದರ್ಶಿ ಪುರುಷೋತ್ತಮ್ ಸೇರಿದಂತೆ ಶ್ರೀ ಮಾರಿಕಾಂಬಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.