ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿ ಹೆಸರಿನಲ್ಲಿ ಲೋಕಸಭಾ ಸ್ಥಾನಗಳ ವಿಂಗಡಣೆ ಮಾಡುವ ಉದ್ದೇಶ ಹೊಂದಿತ್ತು. ಆದರೆ, ಮಹಿಳಾ ಮೀಸಲಾತಿ ಮಸೂದೆ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡೆ ಕುಸುಮಾ ಹನುಮಂತರಾಯಪ್ಪ ಆರೋಪಿಸಿದರು.ವಿಶೇಷ ಲೋಕಸಭಾ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುತ್ತೇವೆ ಎಂದು ಕ್ಷೇತ್ರಗಳ ವಿಂಗಡಣೆ ಮಾಡಲು ಹೊರಟಿದ್ದರು. ಆ ಉದ್ದೇಶ ಇದ್ದುದ್ದರಿಂದಲೇ ಬಿಜೆಪಿಯ ಮಸೂದೆಗೆ ಸೋಲಾಯಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲಿಗೆ ಕಾಂಗ್ರೆಸ್ ಪಕ್ಷ ಕಾರಣವೆಂದು ದೇಶದ ಪ್ರಧಾನ ಮಂತ್ರಿಯಿಂದ ಹಿಡಿದು ಬಿಜೆಪಿ ನಾಯಕರೆಲ್ಲರೂ ಸುಳ್ಳಿನ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.ಮಹಿಳೆಯರಿಗೆ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸ್ವಾತಂತ್ರ್ಯ ದೊರೆಯುತ್ತಿದೆ ಎಂದರೆ ಅದು ಕಾಂಗ್ರೆಸ್ ಕೊಡುಗೆಯಾಗಿದೆ. ಲೋಕಸಭಾ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿಗೂ ಹೆಚ್ಚಾಗಿ ಕ್ಷೇತ್ರ ವಿಂಗಡಣೆಯ ಉದ್ದೇಶವಿತ್ತು ಎಂದು ದೂರಿದರು.
ಮಹಿಳಾ ಮೀಸಲಾತಿ ಜತೆಗೆ ಕ್ಷೇತ್ರವಾರು ವಿಂಗಡಣೆಗೆ ವಿರೋಧ ವ್ಯಕ್ತವಾಗಿ ಮಸೂದೆ ಜಾರಿ ವಿಫಲವಾಯಿತು. ಆದರೆ, ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ವಿರೋಧವಾಗಿದೆ ಎಂದು ಬಿಜೆಪಿಯವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ, ೨೦೨೩ರಲ್ಲೇ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ಎಲ್ಲ ಪಕ್ಷಗಳು ಸಹಕಾರ ನೀಡಿದ್ದವು. ಆದರೆ, ಎನ್‌ಡಿಎ ಸರ್ಕಾರವು ೨೦೨೬ರ ನಂತರ ಜನಗಣತಿಯಾಗಿ, ಕ್ಷೇತ್ರವಾರು ವಿಂಗಡಣೆಯಾಗಿ ನಂತರ ಮಹಿಳಾ ಮೀಸಲಾತಿ ಜಾರಿ ಮಾಡುವುದಾಗಿ ಮುಂದೂಡಿದ್ದರು ಎಂದರು.
ಆದರೆ, ಇಂದು ತರಾತುರಿಯಲ್ಲಿ ದುರುದ್ದೇಶದಿಂದ ೨೦೧೧ರ ಜನಗಣತಿಯಂತೆ ಬಿಲ್ ಜಾರಿ ಮಾಡುವುದಾಗಿ ಹೇಳಿ ಕ್ಷೇತ್ರವಾರು ವಿಂಗಡಣೆಗೆ ಮುಂದಾಗಿದೆ. ೨೦೧೪ರಿಂದಲೂ ಎನ್‌ಡಿಎ ಅಧಿಕಾರದಲ್ಲಿದ್ದು, ಮಹಿಳೆಯರ ಪರ ಕಾಳಜಿಯಿದ್ದರೆ ೫೪೩ ಕ್ಷೇತ್ರಗಳಲ್ಲೇ ಮಹಿಳಾ ಮೀಸಲಾತಿ ತರಬಹುದಿತ್ತು ಎಂದರು.
ಮಹಿಳಾ ಮೀಸಲಾತಿ ಬಿಲ್ ವಿಫಲವಾಗಲಿದೆ ಎಂಬುದು ಬಿಜೆಪಿ ಮೊದಲೇ ಗೊತ್ತಿತ್ತು. ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹಲವೆಡೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂದು ಬಿಂಬಿಸಿ ಚುನಾವಣೆ ಗೆಲ್ಲಲು ಮಹಿಳೆಯರನ್ನು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿ, ರಾಷ್ಟ್ರಪತಿ, ಸಭಾಪತಿಗಳನ್ನು ನೀಡಿದೆ. ರಾಜೀವ್ ಗಾಂಧಿಯವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಒದಗಿಸಲು ಅಡಿಪಾಯ ಹಾಕಿದವರು. ಕಾಂಗ್ರೆಸ್‌ನ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಿದರೆ, ಬಿಜೆಪಿ ಮನುಸ್ಮತಿಯ ಅಡಿಯಲ್ಲಿ ಕೆಲಸ ಮಾಡುತ್ತದೆ ಎಂದು ದೂರಿದರು.
ಬಿಜೆಪಿ ಪಕ್ಷಕ್ಕೆ ಮಹಿಳಾ ಮೀಸಲಾತಿ ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಹಾಗಿದ್ದರೆ ಇರುವ ೫೪೩ ಸ್ಥಾನಗಳಲ್ಲಿ ಮೀಸಲಾತಿ ಕೊಡಬೇಕಿತ್ತು. ಕಾಂಗ್ರೆಸ್ ಪಕ್ಷ ಹಲವು ಕಾರ್ಯಕ್ರಮಗಳನ್ನು ನೀಡಿ ಮಹಿಳೆಯರು ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಹಕಾರ ನೀಡಿದೆ ಎಂದರು.ಬಿಜೆಪಿ ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಬಿಂಬಿಸುತ್ತಿದೆ. ರಾಜ್ಯದಲ್ಲೂ ಶಕ್ತಿ, ಗೃಹಲಕ್ಷ್ಮೀ ಸೇರಿದಂತೆ ಹಲವು ಯೋಜನೆಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ೫೪೩ ಸ್ಥಾನಗಳಲ್ಲಿ ಮಹಿಳಾ ಮೀಸಲಾತಿ ಜಾರಿ ಮಾಡಿದ್ದೇ ಆದರೆ ಈಗಲೂ ಸಹಕಾರ ನೀಡಲು ಸಿದ್ದರಿದ್ದೇವೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಶುಭದಾಯಿನಿ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಶಾರದಾ, ಪಲ್ಲವಿ, ಮಂಗಳಮ್ಮ ಇದ್ದರು.