ಕನ್ನಡಪ್ರಭ ವಾರ್ತೆ ಮಂಡ್ಯ
ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ತೀವ್ರವಾಗಿ ಹೆಚ್ಚಿದೆ. ಸರ್ಕಾರವಾಗಲೀ, ಖಾಸಗಿ ಕಂಪನಿಗಳಾಗಲಿ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿಯೇ ಉದ್ಯಮಿಗಳಾಗುವ ಕನಸು ಕಾಣಬೇಕು. ಹತ್ತಾರು ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳುವ ಸಂಕಲ್ಪವನ್ನು ಈಗಲೇ ಮಾಡಬೇಕು ಎಂದು ನಾಗಮಂಗಲ ಕ್ಷೇತ್ರದ ಶಾಸಕ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶಾಸಕ ಪಿ.ರವಿಕುಮಾರ್ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವನ್ನು ಉದ್ಯೋಗ ಪಡೆಯುವುದಕ್ಕಷ್ಟೇ ವಿದ್ಯಾರ್ಥಿಗಳು ಸೀಮಿತಗೊಳಿಸಿಕೊಳ್ಳಬಾರದು. ಕೇವಲ ಅಂಕವೀರರಾಗಿ ಹೊರಹೊಮ್ಮದೆ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನವನ್ನೂ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆಗ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಜ್ಞಾನವಂತರಾದಾಗ ಯಾವುದಾದರೊಂದು ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.ವಿದ್ಯಾರ್ಥಿಗಳು ದೇಶದ ಇತಿಹಾಸವನ್ನು ತಿಳಿದುಕೊಳ್ಳಬೇಕು. ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಬೇಕು. ನೀವು ಪಡೆದುಕೊಳ್ಳುವ ಶಿಕ್ಷಣ ಮತ್ತು ಜ್ಞಾನದಿಂದ ಅವುಗಳಿಗೆ ಪರಿಹಾರ ಸೂಚಿಸಬೇಕು. ಆ ಮೂಲಕ ದೇಶಕ್ಕೆ ಕೊಡುಗೆ ನೀಡುವಂತೆ ಸಲಹೆ ನೀಡಿದರು.
ಮಂಡ್ಯ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸಿನ ದಾಪುಗಾಲು ಇಡುತ್ತಿರುವುದು ಹೆಮ್ಮೆಯ ವಿಚಾರ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಗಳಿಸಿರುವ ಮಂಡ್ಯ ಜಿಲ್ಲೆ, ಪಿಯುಸಿ ಫಲಿತಾಂಶದಲ್ಲಿ ೨೧ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಪಿಯುಸಿ ಫಲಿತಾಂಶವೂ ಎಸ್ಸೆಸ್ಸೆಲ್ಸಿ ಫಲಿತಾಂಶದಷ್ಟೇ ಉತ್ತಮವಾಗಿ ಮೂಡಿಬರುವುದಕ್ಕೆ ಶ್ರಮವಹಿಸುವಂತೆ ತಿಳಿಸಿದರು.
ಇದುವರೆಗೆ ಯಾವೊಬ್ಬ ಶಾಸಕರೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದ ಉದಾಹರಣೆಗಳು ಇರಲಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಹೊಸ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ೧೪೩೨ ಪ್ರತಿಭಾವಂತ ಮಕ್ಕಳಿಗೆ ೧೦೦೦ ರು., ಶಾಲಾ ಬ್ಯಾಗ್‌ನ್ನು ನೀಡಿ ಪುರಸ್ಕರಿಸಲಾಯಿತು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ವೆಂಕಟಮಣೇಗೌಡ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಎಸ್.ಶಂಭುಗೌಡ, ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಮುಖಂಡರಾದ ನಹೀಂ, ಶುಭದಾಯಿನಿ, ಅಂಜನಾ ಶ್ರೀಕಾಂತ್ ಇತರರಿದ್ದರು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ: ಪಿ.ರವಿಕುಮಾರ್ಕನ್ನಡಪ್ರಭ ವಾರ್ತೆ, ಮಂಡ್ಯ
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗುವಂತೆ ಮುಂದಿನ ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹೇಳಿದರು.ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಬೆಳವಣಿಗೆ ಸಾಧಿಸಬೇಕು. ಐಎಎಸ್, ಐಪಿಎಸ್, ಐಆರ್‌ಎಸ್, ಕೆಎಎಸ್‌ನಂತಹ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು. ಜಿಲ್ಲೆಗೆ ಕೀರ್ತಿ ಕಳಸಗಳಾಗಬೇಕು. ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕೆಂಬ ಆಶಯ ವ್ಯಕ್ತಪಡಿಸಿದರು.
ತಂದೆ-ತಾಯಿಗಳು ಮಕ್ಕಳ ಭವಿಷ್ಯದ ಬಗ್ಗೆ ಉಜ್ವಲ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅದಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಅವರ ಶ್ರಮ ವ್ಯರ್ಥವಾಗಲು ಬಿಡಬಾರದು. ಛಲ ಮತ್ತು ಆತ್ಮವಿಶ್ವಾಸದಿಂದ ಓದಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ತಿಳಿಸಿದರು.