ಮುಂದಿನ ದಿನಗಳಲ್ಲಿ ಕೆಲಸ ಸಿಗುವುದು ಅಷ್ಟು ಸುಲಭವಲ್ಲ. ನಮ್ಮ ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡುವ ತಂತ್ರಜ್ಞಾನಗಳು ಬರುತ್ತಿವೆ. ನಾವು ಮಾಡುವ ಸಣ್ಣಸಣ್ಣ ತಪ್ಪುಗಳು ನಮ್ಮ ಇಡೀ ಜೀವನವನ್ನೇ ಹಾಳುಮಾಡುತ್ತವೆ. ಹಾಗಾಗಿ ನಾವು ಇಡುವ ಪ್ರತಿಯೊಂದು ಹೆಜ್ಜೆಯನ್ನು ಜಾಗ್ರತೆಯಿಂದ ಇಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿಗಳು ಜೀವನದಲ್ಲಿ ಕನಸುಗಳನ್ನು ಕಾಣಬೇಕು. ಆ ಕನಸುಗಳನ್ನು ನನಾಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ನಡೆಸಿದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರಭುದೇವ ಅವರು ಹೇಳಿದರು.ತಾಲೂಕಿನ ಚಿನಕುರಳಿಯ ಗ್ರಾಮದ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ‘ಕಲಾವಿಸ್ಮಯ-2025’ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜದಲ್ಲಿ ಬಡತವನ್ನು ಹಿಮ್ಮೆಟ್ಟಿ ಓದಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಸಾಕಷ್ಟು ಸಾಧಕರು ನಮ್ಮ ಕಣ್ಣಮುಂದಿದ್ದಾರೆ. ದೊಡ್ಡಮಟ್ಟದಲ್ಲಿ ಸಾಧನೆ ಮಾಡಿದ ಯಾವ ಸಾಧಕರು ಸಹ ನಿಮ್ಮಂತೆ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಲ್ಲ. ಹಾಗಾಗಿ ಮಕ್ಕಳು ಇಂತಹ ಸಾಧಕರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ಕೆಲಸ ಸಿಗುವುದು ಅಷ್ಟು ಸುಲಭವಲ್ಲ. ನಮ್ಮ ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡುವ ತಂತ್ರಜ್ಞಾನಗಳು ಬರುತ್ತಿವೆ. ನಾವು ಮಾಡುವ ಸಣ್ಣಸಣ್ಣ ತಪ್ಪುಗಳು ನಮ್ಮ ಇಡೀ ಜೀವನವನ್ನೇ ಹಾಳುಮಾಡುತ್ತವೆ. ಹಾಗಾಗಿ ನಾವು ಇಡುವ ಪ್ರತಿಯೊಂದು ಹೆಜ್ಜೆಯನ್ನು ಜಾಗ್ರತೆಯಿಂದ ಇಡಬೇಕು ಎಂದು ನುಡಿದರು.ಸೋಷಿಯಲ್ ಮೀಡಿಯಾ ಮಕ್ಕಳ ಶೇ.80ರಷ್ಟು ಏಕಾಗ್ರತೆಯನ್ನು ಕಸಿದುಕೊಳ್ಳುತ್ತಿದೆ. ಓದುವ ಮಕ್ಕಳಿಗೆ ಏಕಾಗ್ರತೆ ಬಹಳ ಮುಖ್ಯ. ಸಮಾಜದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು ಎಂದರು.
ಅಮೇರಿಕ ಅಕ್ಕ ಸಂಘದ ಅಧ್ಯಕ್ಷ ಅಮರನಾಥ್‌ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮೂರಿನಲ್ಲಿ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಕಟ್ಟಿ ಅದರ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಪೋಷಕರು ಕಟ್ಟಪಟ್ಟು ನಮ್ಮ ಮಕ್ಕಳು ಓದಿ ಭವಿಷ್ಯ ರೂಪಿಸಿಕೊಳ್ಳಲೆಂದು ಇಂತಹ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದಾರೆ. ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನುಡಿದರು.ಸಂಸ್ಥೆಯ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪಿಯುಸಿ ಹಂತವು ಬಹಳ ಮುಖ್ಯವಾದ ಘಟ್ಟ. ಇಲ್ಲಿ ಮಕ್ಕಳು ಶ್ರದ್ಧೆಯಿಂದ ಓದಿ ಹೆಚ್ಚಿನ ಅಂಕಗಳಿಸುವ ಮೂಲಕ ಭವಿಷ್ಯಕೊಳ್ಳಬೇಕು, ಎಸ್‌ಟಿಜಿ ಶಿಕ್ಷಣ ಸಂಸ್ಥೆಯೂ ಸದಾ ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಗಾಯಕ, ನಟ ನವೀನ್ ಸಜ್ಜು ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಹಾಡುವ ಮೂಲಕ ಮಕ್ಕಳನ್ನು ರಂಜಿಸಿದರು, ಬಳಿಕ ಕಾಲೇಜು ಮಕ್ಕಳು ಹಲವು ಹಾಡುಗಳಿಗೆ ನೃತ್ಯ ಮಾಡುವ ಮೂಲಕ ರಂಜಿಸಿದರು.ಸಮಾರಂಭದಲ್ಲಿ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು, ಉದ್ಯಮಿ ಹರೆಕೋಟಿ ವಿಶ್ವಮಿತ್ರ, ಈ ಸಂಜೆ ಪತ್ರಿಕೆ ಸಂಪಾದಕ ನಾಗರಾಜು, ಸುರೇಶ್, ಯಧುನಾಥ್, ವಕೀಲ ಎಂ.ಕೆ.ಪುಟ್ಟೇಗೌಡ, ಉದ್ಯಮಿ ತಿಮ್ಮಪ್ಪ, ಅಮರ್, ಡಾ.ತಿಬ್ಬೇಗೌಡ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಪ್ರಾಂಶುಪಾಲ ಮಾರುತಿ, ಎಚ್‌ಓಡಿ ರಘುಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.