ಸಾರಾಂಶ
ಬುಧವಾರಗುಡುಗಳಲೆ ಜಾತ್ರಾ ಮೈದಾನದಲ್ಲಿ 80ನೇ ವರ್ಷದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಆರಂಭಗೊಂಡಿತು. ಜಾತ್ರೆ ಪ್ರಯುಕ್ತ ಬೆಳಗ್ಗೆ 9 ಗಂಟೆಯಿಂದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಬಸವೇಶ್ವರ ದೇವರ ಅಡ್ಡಪಲ್ಲಕ್ಕಿ ಮರೆವಣಿಗೆಯು ಶನಿವಾರಸಂತೆ ಬನ್ನಿಮಂಟಪದಿಂದ ಮುಖ್ಯ ರಸ್ತೆ ಮೂಲಕ ಸಾಗಿ ಗುಡುಗಳಲೆ ಜಂಕ್ಷನ್‍ನಲ್ಲಿರುವ ಬಸವೇಶ್ವರ ದೇವಾಲಯದ ಸುತ್ತಾ ಪ್ರದಕ್ಷಿಣೆ ಹಾಕಿ ಗುಡುಗಳಲೆ ಜಾತ್ರಾ ಮೈದಾನದ ದ್ವಾರವನ್ನು ಪ್ರವೇಶಿಸಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಬೇಸಾಯಕ್ಕೆ ಟ್ರ್ಯಾಕ್ಟರ್, ಟಿಲ್ಲರ್ ಯಂತ್ರೋಪಕರಣಗಳ ಬಳಕೆಯಿಂದ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗಿರುವುದ್ದರಿಂದ ಜಾತ್ರೋತ್ಸವಗಳು ಗತ ವೈಭವ ಕಳೆದುಕೊಳ್ಳುತ್ತಿವೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಪೀಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ಬುಧವಾರ ಇಲ್ಲಿನ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಪ್ರಾರಂಭಗೊಂಡಿರುವ 80ನೇ ವರ್ಷದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಆಧುನಿಕ ಬದಲಾವಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಡಾಕ್ಟರ್, ಎಂಜಿನಿಯರ್‌ಗಳಾಗಿ ಪಟ್ಟಣ ಸೇರಿರುವುದ್ದರಿಂದ ಮನೆಗಳು ವೃದ್ಧಾಶ್ರಮಗಳಾಗುತ್ತಿವೆ. ರೈತರು ಯಂತ್ರೋಪಕರಣಗಳನ್ನು ಬಳಸಿ ವ್ಯವಸಾಯ ಮಾಡುತ್ತಿರುವುದರಿಂದ ಜಾನುವಾರುಗಳ ಸಾಕಾಣಿಕೆ ಮರೆಯಾಗುತ್ತಿರುವ ನಿಟ್ಟಿನಲ್ಲಿ ರೈತರು ಹಿಂದಿನ ಕಾಲದಂತೆ ಜಾನುವಾರುಗಳನ್ನು ಬಳಸಿ ಬಸವಣ್ಣನವರು ಹೇಳಿದಂತೆ ಕಾಯಕೆವೇ ಕೈಲಾಸ ಎಂಬಂತೆ ಶ್ರಮವಹಿಸಿ ವ್ಯವಸಾಯ ಮಾಡಲು ಪ್ರಯತ್ನಿಸಿದರೆ ಜಾನುವಾರುಗಳ ಸಂಖ್ಯೆಯು ವೃದ್ದಿಯಾಗುತ್ತದೆ ಎಂದರು.ಇತ್ತೀಚಿನ ವರ್ಷಗಳಲ್ಲಿ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯು ಕಳೆಗುಂದುತ್ತಿದ್ದು ಈ ನಿಟ್ಟಿನಲ್ಲಿ ಜಾತ್ರಾ ಸಮಿತಿಯವರು ಜಾತ್ರೆ ಹೆಸರಿನಲ್ಲಿ ರಥೋತ್ಸವ ಹಮ್ಮಿಕೊಂಡರೆ ಜಾತ್ರೆಯ ವೈಭವ ಮರುಕಳಿಸಲು ಸಾಧ್ಯವಾಗಬಹುದು ಎಂದು ಸಲಹೆ ನೀಡಿದರು.
ಮುದ್ದಿನಕಟ್ಟೆ ಮಠಾದೀಶ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನ ದುರಾಸೆಯಿಂದ ವಿಶ್ವಾಸ ಎಂಬುವುದು ಮರೆಯಾಗುತ್ತಿದೆ. ಇಂದು ರೈತರು ದೇಶೀಯ ತಳಿಯ ಹಸುಗಳನ್ನು ಸಾಕಾಣಿಕೆ ಮಾಡುತ್ತಿಲ್ಲ. ಹೆಚ್ಚು ಹಾಲು ನೀಡುವ ಮೂಲಕ ಹೆಚ್ಚುಹಣ ಸಂಪಾದನೆ ತಂದುಕೊಡುವಂತಹ ವಿದೇಶಿ ತಳಿಯ ಹಸುಗಳನ್ನು ಸಾಕಾಣಿಕೆ ಮಾಡುತ್ತಿರುವುದ್ದರಿಂದ ದೇಶಿಯ ತಳಿಯ ಹಸುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ ಎಂದರು.ಜಾನುವಾರುಗಳಿಂದ ಎಲ್ಲಾ ರೀತಿಯಲ್ಲೂ ಉಪಯೋಗವಿದ್ದು ಇದರ ಸಗಣಿಯಿಂದ ಸಾವಯವ ಗೊಬ್ಬರ, ಉತ್ತಮ ಆಮ್ಲುಜನಕ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜಾನುವಾರುಗಳ ಸಂಖ್ಯೆ ವೃಧ್ದಿಗೊಳ್ಳಬೇಕಿದೆ ಎಂದ ಅವರು, ಇಂದಿನ ಯುವಕರು ಆಧುನಿಕತೆಗೆ ಮಾರುಹೋಗಿ ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಿರುವುದು ದುರಂತ. ಭೂಮಿಯ ಸ್ಪರ್ಶಕ್ಕಿಂತ ಕಾಂಕ್ರೀಟ್ ಸ್ಪರ್ಶವೆ ಹೆಚ್ಚಾಗುತ್ತಿರುವುದ್ದರಿಂದ ಅವರ ಆಯುಷ್ಯ ಸಹ ಕಮ್ಮಿಯಾಗುತ್ತಿದೆ ಎಂದು ವಿಷಾದಿಸಿದರು.
ಶನಿವಾರಸಂತೆ ಸಿಐ ಚಂದ್ರಶೇಖರ್ ಜಾತ್ರೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‍ಕುಮಾರ್ ಅಧ್ಯಕ್ಷತೆವಹಿಸಿದರು. ಸಮಾರಂಭದಲ್ಲಿ ಶಿಡುಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್, ಗ್ರಾ.ಪಂ.ಉಪಾಧ್ಯಕ್ಷ ಎಚ್.ಎಸ್.ಅಶೋಕ್, ಪ್ರಮುಖರಾದ ಡಿ.ಬಿ.ಸೋಮಪ್ಪ, ಡಿ.ಬಿ.ಧರ್ಮಪ್ಪ, ಪೂರ್ಣಿಮಾ ಕಿರಣ್, ವೀರೇಂದ್ರ ಕುಮಾರ್, ಹಾಲಪ್ಪ, ವಿನೂತ್ ಶಂಕರ್, ಉಮಾಶಂಕರ್, ಮಾಜಿ ತಾ.ಪಂ.ಸದಸ್ಯ ಕುಶಾಲಪ್ಪ ಜಾತ್ರಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಮುಂತಾದವರು ಹಾಜರಿದ್ದರು.ಅಡ್ಡಪಲ್ಲಕ್ಕಿ ವೈಭವ: ಜಾತ್ರೆ ಪ್ರಯುಕ್ತ ಬೆಳಗ್ಗೆ 9 ಗಂಟೆಯಿಂದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಬಸವೇಶ್ವರ ದೇವರ ಅಡ್ಡಪಲ್ಲಕ್ಕಿ ಮರೆವಣಿಗೆಯು ಶನಿವಾರಸಂತೆ ಬನ್ನಿಮಂಟಪದಿಂದ ಮುಖ್ಯ ರಸ್ತೆ ಮೂಲಕ ಸಾಗಿ ಗುಡುಗಳಲೆ ಜಂಕ್ಷನ್‍ನಲ್ಲಿರುವ ಬಸವೇಶ್ವರ ದೇವಾಲಯದ ಸುತ್ತಾ ಪ್ರದಕ್ಷಿಣೆ ಹಾಕಿ ಗುಡುಗಳಲೆ ಜಾತ್ರಾ ಮೈದಾನದ ದ್ವಾರವನ್ನು ಪ್ರವೇಶಿಸಿತು. ನಂತರ ಬಸವೇಶ್ವರ ದೇವಾಲಯದಲ್ಲಿ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆ ಕೊನೆಗೊಂಡಿತು. ಮೆರವಣಿಗೆ ಸಂದರ್ಭ ಸಾಂಕೇತಿಕವಾಗಿ ಅಲಂಕರಿಸಿದ ಎತ್ತುಗಳು ಇದ್ದವು. ಇದರೊಂದಿಗೆ ನಂದಿ ಧ್ವಜ, ವೀರಾಗಾಸೆ ಕುಣಿತ, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.