ಗ್ರಾಮೀಣ ಸೊಗಡಿನ ಕಬಡ್ಡಿ ಆಟ ಎಲ್ಲರಿಗೂ ಪ್ರೀತಿಪಾತ್ರವಾದ ಕ್ರೀಡೆಯಾಗಿದೆ: ಚುಂಚನಗಿರಿ ಶ್ರೀ

| Published : Jan 25 2024, 02:03 AM IST

ಗ್ರಾಮೀಣ ಸೊಗಡಿನ ಕಬಡ್ಡಿ ಆಟ ಎಲ್ಲರಿಗೂ ಪ್ರೀತಿಪಾತ್ರವಾದ ಕ್ರೀಡೆಯಾಗಿದೆ: ಚುಂಚನಗಿರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭೂ ಖಂಡದ 200 ದೇಶಗಳ ಪೈಕಿ ಭಾರತ ಹೆಚ್ಚು ತರುಣರನ್ನೇ ಹೊಂದಿದೆ. ಆದರೆ, ದೇಶದ ತಾರುಣ್ಯದ ಸ್ಥಿತಿ ಹೇಗಿದೆ ಎಂಬುದನ್ನು ಆಲೋಚಿಸಬೇಕಿದೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿರುವಂತೆ ಭಾರತೀಯರು ಎಲ್ಲ ಕ್ರೀಡೆಯ ಉತ್ತಮ ಪ್ರೋತ್ಸಾಹಕರು. ಆದರೆ. ಉತ್ತಮ ಅಭ್ಯಾಸಗಾರರಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಣ್ಣಿನ ಜೊತೆ ಹೆಚ್ಚು ಬಾಂಧವ್ಯ ಹೊಂದಿರುವ ಗ್ರಾಮೀಣ ಸೊಗಡಿನ ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಿದರೆ ಪ್ರತಿಯೊಬ್ಬರ ದೇಹ ಸದೃಢವಾಗಿರುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಕ್ರೀಡಾಂಗಣದಲ್ಲಿ 67ನೇ ರಾಷ್ಟ್ರಮಟ್ಟದ ಬಾಲಕ - ಬಾಲಕಿಯರ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

ಗ್ರಾಮೀಣ ಸೊಗಡಿನ ಕಬಡ್ಡಿ ಆಟ ಎಲ್ಲರಿಗೂ ಪ್ರೀತಿಪಾತ್ರವಾದ ಕ್ರೀಡೆಯಾಗಿದೆ. ದೇಹದ ಪರಿಪೂರ್ಣ ಸಮರ್ಥತೆಗೆ ಸ್ವಾಸ್ಥ್ಯ ಮನಸ್ಸಿರಬೇಕು. ಇವೆಲ್ಲವೂ ಕ್ರೀಡೆಯಿಂದ ಸಿಗುವುದರಿಂದ ಎಲ್ಲರೂ ಈ ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟು ಭಾಗಹಿಸಬೇಕು ಎಂದರು.

ದೇಶಿಯ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕವಾಗಿ ಸದೃಢವಾಗಬಹುದು. ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಪ್ರತಿಭೆಗಳು ಹೊರ ಹೊಮ್ಮಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲು ಸಾಧ್ಯವಾಗುತ್ತದೆ. ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ಬಂದಿರುವ ಎಲ್ಲ ಕ್ರೀಡಾಪಟುಗಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಭೂ ಖಂಡದ 200 ದೇಶಗಳ ಪೈಕಿ ಭಾರತ ಹೆಚ್ಚು ತರುಣರನ್ನೇ ಹೊಂದಿದೆ. ಆದರೆ, ದೇಶದ ತಾರುಣ್ಯದ ಸ್ಥಿತಿ ಹೇಗಿದೆ ಎಂಬುದನ್ನು ಆಲೋಚಿಸಬೇಕಿದೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿರುವಂತೆ ಭಾರತೀಯರು ಎಲ್ಲ ಕ್ರೀಡೆಯ ಉತ್ತಮ ಪ್ರೋತ್ಸಾಹಕರು. ಆದರೆ. ಉತ್ತಮ ಅಭ್ಯಾಸಗಾರರಲ್ಲ ಎಂದರು.

ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಆರೋಗ್ಯ ಸೂಚ್ಯಂಕ ಕಡಿಮೆ ಇದೆ. ಇದನ್ನು ನಾವು ಹೆಚ್ಚು ಮಾಡಲು ಸಾಧ್ಯವಾದರೆ ಮಾತ್ರ ನಮ್ಮ ದೇಶದ ಮಾನವ ಸಂಪನ್ಮೂಲವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಿರುವ ಏಕೈಕ ಮಾಧ್ಯಮವೆಂದರೆ ಕ್ರೀಡೆ ಎಂದರು.