ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ವಾಹನಕ್ಕೆ ಕಾರು ತಗುಲಿದೆ ಎಂದು ಕಾರಿನ ಬ್ಯಾನೆಟ್ ಮೇಲೆ ಕುಳಿತಿದ್ದ ಗೂಡ್ಸ್ ವಾಹನದ ಚಾಲಕನನ್ನು ಒಂದು ಕಿ.ಮೀ ತನಕ ಕಾರಿನ ಚಾಲಕ ಎಳೆದೊಯ್ದಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿ ನಡೆದಿದೆ.ಬುಧವಾರ ಮಧ್ಯಾಹ್ನ 12.45 ಸುಮಾರಿಗೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಾಡಿ ತಗುಲಿರುವ ವಿಚಾರಕ್ಕೆ ಗೂಡ್ಸ್ ವಾಹನ ಚಾಲಕ ನಂಜುಡ ಹಾಗೂ ಕಾರಿನ ಚಾಲಕ ಸುರೇಶ್ (52) ನಡುವೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಸರಕು ವಾಹನ ಚಾಲಕ ಕಾರಿನ ಬ್ಯಾನೆಟ್ ಮೇಲೆ ಕುಳಿತಿದ್ದಾನೆ. ಇದರಿಂದ ಆಕ್ರೋಶಗೊಂಡ ಚಾಲಕ ಆತನ ಸಮೇತ ಕಾರು ಚಾಲನೆ ಮಾಡಿದ್ದು, ವಾಹನದಿಂದ ಇಳಿಸುವಂತೆ ಕೂಗಾಡಿದರೂ ಸುಮಾರು ಒಂದು ಕಿಲೋಮೀಟರ್‌ವರೆಗೂ ಎಳೆದು ಕೊಂಡು ಹೋಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲಸೂರು ಠಾಣೆ ಪೊಲೀಸರು ಪುಲಿಕೇಶಿನಗರದ ಕಾರಿನ ಚಾಲಕ ಸುರೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.