ಕನ್ನಡಪ್ರಭ ವಾರ್ತೆ ಬೆಂಗಳೂರು
ವರದಕ್ಷಿಣೆ ಕಿರುಕುಳ ಬೇಡಿಕೆ ಸಂಬಂಧ ಕ್ರೌರ್ಯ ಅಪರಾಧದಡಿ ಪತಿಯ ಕುಟುಂಬಸ್ಥರ ವಿರುದ್ಧ ಮಾತ್ರ ವಿಚಾರಣೆಗೊಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅಪರಿಚಿತ, ನೆರೆಹೊರೆಯವರು ಮತ್ತು ಪತಿಯ ಪ್ರಿಯತಮೆಯ ವಿರುದ್ಧ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498ಎ ಅಡಿ ವಿವಾಹಿತ ಮಹಿಳೆ ತನ್ನ ಪತಿ ಅಥವಾ ಅವರ ಸಂಬಂಧಿಕರು ವರದಕ್ಷಿಣೆ ಬೇಡಿಕೆ ಮುಂದಿಟ್ಟು ಹಿಂಸೆ (ಕ್ರೌರ್ಯ) ನೀಡಿದ ಅಪರಾಧ ಕುಟುಂಬದ ಸದಸ್ಯರ ನಡುವಿನ ವಿವಾದಗಳಿಗೆ ಸಂಬಂಧಿಸಿದ್ದಾಗಿದೆ. ಈ ಅಪರಾಧದಡಿ ಪತಿಯ ಪ್ರಿಯತಮೆಯನ್ನು ವಿಚಾರಣೆಗೆ ಒಳಪಡಿಸಲಾಗದು ಎಂದು ಹೇಳಿದೆ.
ಕೌಟುಂಬಿಕ ಹಿಂಸೆ ಆರೋಪದಡಿ ತನ್ನ ವಿರುದ್ಧ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿದಾರ ಮಹಿಳೆಯ ವಿರುದ್ಧದ ಎಫ್‌ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.ವರದಕ್ಷಿಣೆ ಕಿರುಕುಳ ಬೇಡಿಕೆ ಸಂಬಂಧ ಕ್ರೌರ್ಯ ಅಪರಾಧದಡಿ ಪತಿಯ ಕುಟುಂಬಸ್ಥರ ವಿರುದ್ಧ ಮಾತ್ರ ವಿಚಾರಣೆಗೊಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ.ಅಪರಿಚಿತ, ನೆರೆಹೊರೆಯವರು ಮತ್ತು ಪತಿಯ ಪ್ರಿಯತಮೆಯ ವಿರುದ್ಧ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯು ಆ ಕುಟುಂಬದ ಸದಸ್ಯ ಎಂಬುದಾಗಿ ಪರಿಗಣಿಸಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರ ಮಹಿಳೆಯ ವಿರುದ್ಧ ಹಲ್ಲೆ ನಡೆಸಿದ ಮತ್ತು ಕ್ರಿಮಿನಲ್ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ದೋಷಾರೋಪಪಟ್ಟಿಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಅರ್ಜಿದಾರ ಮಹಿಳೆಯನ್ನು ಕ್ರಿಮಿನಲ್ ಪ್ರಕರಣದಲ್ಲಿ ಎಳೆದು ತರಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಪ್ರಕರಣದ ವಿವರ
ದೂರುದಾರ ಮಹಿಳೆ 2021ರಲ್ಲಿ ರವಿ (ಹೆಸರು ಬದಲಿಸಲಾಗಿದೆ) ಎಂಬುವವರನ್ನು ವಿವಾಹವಾಗಿದ್ದರು. ಇದಾದ ಕೆಲ ದಿನಗಳ ಬಳಿಕ ದೂರುದಾರೆಯು ಪತಿಯ ಕುಟುಂಬದ ಸದಸ್ಯರು ಮತ್ತಷ್ಟು ವರದಕ್ಷಿಣೆ ತರುವಂತೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಪತಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ. ಅದಕ್ಕೆ ನಿರಾಕರಿಸಿದ ಕಾರಣ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು.
ಪತಿಯು ತನ್ನ ಪ್ರೇಯಸಿಯೊಂದಿಗೆ ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಿದ್ಧಾರೆ. ಶೌಚಾಲಯದಲ್ಲಿ ಕುಳಿತು ತಾಸುಗಟ್ಟಲೆ ಮಾತನಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದಾಗ ನಿನ್ನನ್ನು ವಿವಾಹವಾಗದಿದ್ದರೆ ಪ್ರೇಯಸಿಯೊಂದಿಗೆ ಸುಖವಾಗಿರುತ್ತಿದ್ದೆ ಎಂದು ಹೇಳಿ, ಕಾಲು ಮುರಿಯುವಂತೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಪತಿಯ ಕುಟುಂಬಸ್ಥರು ಹಾಗೂ ಪ್ರಿಯತಮೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮೈಸೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ದೂರು ಆಧರಿಸಿ ತನಿಖೆ ನಡೆಸಿದ್ದ ಮೈಸೂರಿನ ಮಹಿಳಾ ಠಾಣಾ ಪೊಲೀಸರು, ಅರ್ಜಿದಾರ ಮಹಿಳೆಯನ್ನು ಐದನೇ ಆರೋಪಿಯನ್ನಾಗಿಸಿ ಅಧೀನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದರಿಂದ ತನ್ನ ವಿರುದ್ಧದ ಪ್ರಕರಣ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
