ಹಗರಿಬೊಮ್ಮನಹಳ್ಳಿ: ಹೊಸಪೇಟೆ- ಹರಿಹರ ರಾಜ್ಯ ಹೆದ್ದಾರಿಯ ಮೋರಗೇರಿ ಕ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತವೊಂದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೪೫ಕ್ಕೂ ಹೆಚ್ಚು ಪ್ರಯಾಣಿಕರು ಪವಾಡ ಸದೃಶ್ಯರಾಗಿ ಪಾರಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಹಡಗಲಿ ಸಾರಿಗೆ ಘಟಕಕ್ಕೆ ಸೇರಿದ ಬಸ್, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಹೊಸಪೇಟೆಯತ್ತ ತೆರಳುತ್ತಿತ್ತು. ತಾಲೂಕಿನ ಮೋರಗೇರಿ ಕ್ರಾಸ್ ಬಳಿ ಬಸ್ ಚಲಿಸುತ್ತಿದ್ದಾಗ ಶಾಕ್ ಅಬ್ಸರ್ವರ್ ಬ್ಲೇಡ್ ತುಂಡಾಗಿ ಬಸ್ ನಿಯಂತ್ರಣಕ್ಕೆ ಬಾರದಿದ್ದಾಗ ಚಾಲಕ ಬಸ್‌ನ್ನು ನಿಧಾನವಾಗಿ ರಸ್ತೆ ಬದಿಯ ತಗ್ಗಿಗೆ ಇಳಿಸಿದ್ದಾರೆ. ಅಲ್ಲದೇ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ಬಸ್‌ನ್ನು ನಿಯಂತ್ರಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಜ್ಜುಗುಜ್ಜಾಗಿದೆ. ಪ್ರಯಾಣಿಕರು ಮಾತ್ರ ಅಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೪೫ಕ್ಕೂ ಹೆಚ್ಚು ಪ್ರಯಾಣಿಕರು ವಿಶೇಷವಾಗಿ ವಿದ್ಯಾರ್ಥಿಗಳು ಸಂಭವಿಸಬಹುದಾಗಿದ್ದ ಅಪಘಾತದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಮೂವರು ಪ್ರಯಾಣಿಕರನ್ನು ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪಟ್ಟಣದ ಘಟಕದ ಸಾರಿಗೆ ನಿರೀಕ್ಷಕ ಸಂತೋಷ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ:
ತಾಲೂಕಿನ ಬಹುತೇಕ ಗ್ರಾಮಗಳಿಂದ ಪಟ್ಟಣಕ್ಕೆ ಸಂಪರ್ಕಿಸುವ ಜಿಲ್ಲಾ ರಸ್ತೆಗಳು ಆಳವಾದ ತಗ್ಗು- ಗುಂಡಿಗಳಿಂದ ಸಂಪೂರ್ಣ ಹಾಳಾಗಿವೆ. ರಸ್ತೆಯಲ್ಲಿ ಸಂಚರಿಸುವ ಕಾರು, ಬಸ್ಸು, ಲಾರಿಗಳ ಶಾಕ್ ಅಬ್ಸರ್ವರ್ ಬ್ಲೇಡ್ ಮುರಿದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿವೆ. ರಸ್ತೆಗಳ ನಿರ್ವಹಣೆ ಕುರಿತು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರಿ ಕ್ರಾಸ್ ಬಳಿ ಮಂಗಳವಾರ ಬಸ್ಸಿನ ಶಾಕ್ ಅಬ್ಸರ್ವರ್ ಬ್ಲೇಡ್ ತುಂಡಾಗಿ ಸಾರಿಗೆ ಬಸ್ ಅಪಘಾತಕ್ಕೀಡಾಗಿರುವುದು.