ಗಾಳಿ ವಿದ್ಯುತ್ ಕಂಪನಿಗಳ ಅಕ್ರಮ ಗಣಿಗಾರಿಕೆಗೆ ರೈತ ಬಲಿ ಎಂಬ ಶೀರ್ಷಿಕೆಯಡಿ ಜೂ. 6ರಂದು ಕನ್ನಡಪ್ರಭ ಸಚಿತ್ರ ವರದಿಯನ್ನು ಪ್ರಕಟಿಸಿ ಆಡಳಿತ ಯಂತ್ರವನ್ನು ಬಡಿತೆಬ್ಬಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ತಹಸೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಜಂಟಿಯಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗದಗ: ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಗಾಳಿ ವಿದ್ಯುತ್ ಕಂಪನಿಗಳ ಬೇಜವಾಬ್ದಾರಿಯಿಂದ ಅಮಾಯಕ ರೈತರೊಬ್ಬರು ಜೀವ ಕಳೆದುಕೊಂಡ ದುರಂತಕ್ಕೆ ಸಂಬಂಧಿಸಿದಂತೆ, ಕೊನೆಗೂ ಎಚ್ಚೆತ್ತ ಅಧಿಕಾರಿಗಳ ತಂಡ ಮಂಗಳವಾರ ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದೆ.

ಗಾಳಿ ವಿದ್ಯುತ್ ಕಂಪನಿಗಳ ಅಕ್ರಮ ಗಣಿಗಾರಿಕೆಗೆ ರೈತ ಬಲಿ ಎಂಬ ಶೀರ್ಷಿಕೆಯಡಿ ಜೂ. 6ರಂದು ಕನ್ನಡಪ್ರಭ ಸಚಿತ್ರ ವರದಿಯನ್ನು ಪ್ರಕಟಿಸಿ ಆಡಳಿತ ಯಂತ್ರವನ್ನು ಬಡಿತೆಬ್ಬಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ತಹಸೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಜಂಟಿಯಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

​ಪರವಾನಗಿ ಇಲ್ಲದ ಬೃಹತ್ ಕ್ವಾರಿ: ​ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದಾಗ ಆಘಾತಕಾರಿ ಸತ್ಯಾಂಶ ಹೊರಬಂದಿದೆ. ದುರಂತ ಸಂಭವಿಸಿದ ಸರ್ವೇ ನಂಬರಿನಲ್ಲಿ ಗರಸು ತೆಗೆಯಲು ಗಾಳಿ ವಿದ್ಯುತ್ ಕಂಪನಿಯು ತಹಸೀಲ್ದಾರ್ ಕಚೇರಿಯಿಂದಾಗಲಿ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಾಗಲಿ ಪೂರ್ವಾನುಮತಿ ಅಥವಾ ಪರವಾನಗಿ ಪಡೆದಿರಲಿಲ್ಲ. ಸಂಪೂರ್ಣ ಅಕ್ರಮವಾಗಿ ಇಷ್ಟು ದೊಡ್ಡ ಬೃಹತ್ ಕ್ವಾರಿಯನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳೇ ಸ್ವತಃ ಒಪ್ಪಿಕೊಂಡರು.

ಆಕ್ರೋಶ: ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ಇಂತಹ ಅಕ್ರಮ ಮಣ್ಣು ಗಣಿಗಾರಿಕೆ ಕ್ವಾರಿಗಳ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಹಲವಾರು ಬಾರಿ ದೂರು ನೀಡಲಾಗಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಜೀವವೊಂದು ಬಲಿಯಾದ ಮೇಲೆ ಅಧಿಕಾರಿಗಳು ನಾಮಕಾವಸ್ಥೆಗೆ ಭೇಟಿ ನೀಡುತ್ತಿದ್ದಾರೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಇನ್ನೂ ಎಷ್ಟು ಜೀವಗಳು ಬಲಿಯಾಗಬೇಕು? ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸಿದರು.

​ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಅಸಮರ್ಪಕ ನೀರು ಸರಬರಾಜು ಆಗುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಗ್ರಾಮದಲ್ಲಿ ನೀರಿನ ವ್ಯವಸ್ಥೆ ಸರಿಯಾಗಿಲ್ಲದ ಕಾರಣವೇ ರೈತರು ದೂರದ ಇಂತಹ ಅಪಾಯಕಾರಿ ಜಾಗಗಳಿಗೆ ನೀರು ತರಲು ಹೋಗಬೇಕಾಯಿತು. ವ್ಯವಸ್ಥೆ ಸರಿಯಾಗಿದ್ದರೆ ಇಂದು ಈ ಜೀವ ಉಳಿಯುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ತಾಲೂಕು ಪಂಚಾಯಿತಿ ಇಒ ಅವರನ್ನು ತರಾಟೆಗೆ ತೆಗೆದುಕೊಂಡರು.

10 ಲಕ್ಷಕ್ಕೆ ಆಗ್ರಹ: ​ಮೃತರ ಮನೆಗೆ ಭೇಟಿ ನೀಡಿದ ತಹಸೀಲ್ದಾರ್ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರು. ಪರಿಹಾರ ಕೊಡಿಸುವ ಭರವಸೆಯನ್ನು ಕುಟುಂಬಸ್ಥರಿಗೆ ನೀಡಿದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ​ಕುಟುಂಬದ ಏಕೈಕ ಆಧಾರಸ್ತಂಭವನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಕೇವಲ 2 ಲಕ್ಷ ಪರಿಹಾರ ಸಮಂಜಸವಲ್ಲ. ​ಸರ್ಕಾರ ತಕ್ಷಣವೇ 10 ಲಕ್ಷ ಪರಿಹಾರ ಕೊಡಬೇಕು. ಕಂಪನಿಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.