ಗದಗ: ಮಣ್ಣಿನ ಆರೋಗ್ಯ ಕಾಪಾಡುವುದು ಇಂದಿನ ಪ್ರಮುಖ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ನೀಡಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ರೈತರ ಕೃಷಿ ಭೂಮಿಯ ಸಂರಕ್ಷಣೆ, ಮಣ್ಣಿನ ಫಲವತ್ತತೆ ಕಾಪಾಡುವಿಕೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಖೇತ್ ಬಚಾವೋ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.

ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಕೃಷಿ ಭೂಮಿಯ ಸಂರಕ್ಷಣೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವಿಕೆ ಇಂದಿನ ಅಗತ್ಯವಾಗಿದೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಮಣ್ಣಿನ ಪರೀಕ್ಷೆ, ನೀರಿನ ಸಮರ್ಪಕ ಬಳಕೆ ಹಾಗೂ ಸಾವಯವ ಮತ್ತು ನೈಸರ್ಗಿಕ ಕೃಷಿ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಖೇತ್ ಬಚಾವೋ ಅಭಿಯಾನದ ಮೂಲಕ ರೈತರಿಗೆ ಕೃಷಿ ಭೂಮಿಯ ಸಂರಕ್ಷಣೆ, ಮಣ್ಣಿನ ಸವಕಳಿ ತಡೆ, ಬೆಳೆ ವೈವಿಧ್ಯತೆ, ನೀರಿನ ಸಂರಕ್ಷಣೆ ಹಾಗೂ ಪರಿಸರಸ್ನೇಹಿ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸಲಾಗುವುದು. ಈ ಅಭಿಯಾನವು ರೈತರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಿದ್ದು, ರೈತ ಸಮುದಾಯವೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಇದರ ಉದ್ದೇಶಗಳನ್ನು ಸಾಕಾರಗೊಳಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ‌.ಎನ್. ಶ್ರೀಧರ, ಜಂಟಿ ಕೃಷಿ ನಿರ್ದೇಶಕಿ ಚೇತನಾ‌ ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೆ., ಜಿಪಂ ಅಧಿಕಾರಿಗಳಾದ ಎಂ.ವಿ. ಚಳಗೇರಿ, ಎಸ್.ಎಸ್. ಕಲ್ಮನಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.