ಆನ್ ಲೈನ್ ನಲ್ಲಿ ಔಷಧಿಗಳ ವ್ಯಾಪಾರಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸಿ ಔಷಧಿ ವ್ಯಾಪಾರಸ್ಥರ ಸಂಘ ಕರೆ ನೀಡಿದ್ದ ಔಷಧಿ ಮಳಿಗೆಗಳ ಬಂದ್ ಕೊಡಗಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆನ್ ಲೈನ್ ನಲ್ಲಿ ಔಷಧಿಗಳ ವ್ಯಾಪಾರಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸಿ ಔಷಧಿ ವ್ಯಾಪಾರಸ್ಥರ ಸಂಘ ಕರೆ ನೀಡಿದ್ದ ಔಷಧಿ ಮಳಿಗೆಗಳ ಬಂದ್ ಕೊಡಗಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಕೊಡಗು ಜಿಲ್ಲೆಯಾದ್ಯಂತಲಿನ 200 ಕ್ಕೂ ಅಧಿಕ ಔಷಧಿ ಅಂಗಡಿಗಳು ಬುಧವಾರ ವ್ಯಾಪಾರ ಸ್ಥಗಿತಗೊಳಿಸಿದ್ದವು. ಬಂದ್ ಗೆ ಸಹಕಾರ ನೀಡಿದ ಗ್ರಾಹಕರಿಗೆ ಸಂಘದ ವತಿಯಿಂದ ಧನ್ಯವಾದ ಸಲ್ಲಿಸುವುದಾಗಿ ಸಂಘದ ಜಿಲ್ಲಾಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಹೆಚ್ ಹಾದಿಮನಿ ಸಂಘದಿಂದ ನೀಡಲಾದ ಮನವಿ ಪತ್ರವನ್ನು ಸ್ವೀಕರಿಸಿದರು. ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜೀವನ್ ಕುಶಾಲಪ್ಪ, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷ ಎ.ಕೆ. ವಿನೋದ್ , ಖಜಾಂಜಿ ಪ್ರಸಾದ್ ಗೌಡ ಹಾಜರಿದ್ದರು.

ಆನ್‌ಲೈನ್‌ನಲ್ಲಿ ಔಷಧಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿಬೇಕು. ಆನ್ ಲೈನ್ ಔಷಧಿಗಳಿಂದ ಜನರ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಹಕರ ಹಿತರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಘದ ಬೇಡಿಕೆಗೆ ತುತು೯ ಸ್ಪಂದಿಸುವಂತೆಯೂ ಸಂಘದ ಪ್ರಮುಖರು ಮನವಿಯಲ್ಲಿ ಕೋರಿದ್ದಾರೆ.

ಸೂಕ್ತ ವೈದ್ಯಕೀಯ ಸಮಾಲೋಚನೆ ಇಲ್ಲದೇ ಆನ್ ಲೈನ್ ಮೂಲಕ ಔಷಧಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಕೋಟ್ಯಾಂತರ ರೋಗಿಗಳು ಆನ್ ಲೈನ್ ಔಷಧಿ ಸೇವನೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಆನ್ ಲೈನ್ ಔಷಧಿ ವಹಿವಾಟಿನಿಂದ ದೇಶವ್ಯಾಪಿ ಸಣ್ಣ ಔಷಧಿ ವ್ಯಾಪಾರಸ್ಥರೂ ಸಮಸ್ಯೆಗೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಔಷಧಿಗಳ ಅಕ್ರಮ ಆನ್ ಲೈನ್ ಮಾರಾಟಕ್ಕೆ ಕಡಿವಾಣ ಹಾಕಲೇಬೇಕು ಎಂದು ಮನವಿಯಲ್ಲಿ ಪ್ರಧಾನಿಗಳನ್ನು ಒತ್ತಾಯಿಸಲಾಗಿದೆ.ಜನೌಷಧಿಗೆ ಬೇಡಿಕೆ!

ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ಮೆಡಿಕಲ್ ಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಗ್ರಾಹಕರು ಪರದಾಡಿದರು. ಇದರಿಂದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಿಗೆ ತೆರಳಿ ಗ್ರಾಹಕರು ಔಷಧಿಗಳನ್ನು ಖರೀದಿಸಿದರು.