ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್‌ದಿಂದ ಇಂಡಿಪಂಪ್ ವರೆಗಿನ ರಸ್ತೆ ಸಾಕಷ್ಟು ಜನದಟ್ಟಣೆಯಿಂದ ಕೂಡಿದ್ದು, ಸುಗಮ ಸಂಚಾರಕ್ಕಾಗಿ ರಸ್ತೆ ಅಗಲೀಕರಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಕ್ರಮಕೈಗೊಳ್ಳಬೇಕು.

ಹುಬ್ಬಳ್ಳಿ:

ಪೂರ್ವ ವಿಧಾನಸಭಾ ಕ್ಷೇತ್ರದ ನ್ಯೂ ಇಂಗ್ಲಿಷ್ ಸ್ಕೂಲ್‌ದಿಂದ ಇಂಡಿ ಪಂಪ್ ವರೆಗಿನ ರಸ್ತೆ ಅಗಲೀಕರಣ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರವೇ ಭೂಸ್ವಾಧೀನದ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ಕುರಿತು ಮಾತನಾಡಿದರು.

ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್‌ದಿಂದ ಇಂಡಿಪಂಪ್ ವರೆಗಿನ ರಸ್ತೆ ಸಾಕಷ್ಟು ಜನದಟ್ಟಣೆಯಿಂದ ಕೂಡಿದ್ದು, ಸುಗಮ ಸಂಚಾರಕ್ಕಾಗಿ ರಸ್ತೆ ಅಗಲೀಕರಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಅಲ್ಲದೇ ಅಕ್ಕಪಕ್ಕದ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಯಾವುದೇ ಅಡೆ-ತಡೆ ಬಂದರೂ ಅದನ್ನು ಪರಿಹರಿಸಿ ಶೀಘ್ರವೇ ಈ ಭಾಗದ ಜನರಿಗೆ ಸಂಚರಿಸಲು ಅನುಕೂಲ ಮಾಡಿಕೊಡಬೇಕು ಎಂದರು.

ಭೂ ಸ್ವಾಧೀನಕ್ಕೆ ₹9.5 ಕೋಟಿ:

ರಸ್ತೆ ಅಗಲೀಕರಣ ಸಮೀಕ್ಷಾ ವರದಿಯಲ್ಲಿ ತಿಳಿಸಿರುವಂತೆ 243 ಖಾಸಗಿ ಸ್ವತ್ತುಗಳು ಸೇರಿದಂತೆ ಭೂಸ್ವಾಧೀನಕ್ಕೆ ಅವಶ್ಯವಿರುವ ₹ 9.5 ಕೋಟಿಗೂ ಹೆಚ್ಚು ಅನುದಾನವನ್ನು ವಿಶೇಷ ಅನುದಾನದಿಂದ ಭರಿಸಲಾಗುವುದು. ಈ ಕುರಿತು ಸರ್ಕಾರದ ಮಟ್ಟದಲ್ಲೂ ಚರ್ಚಿಸಲಾಗುವುದು. ಹೀಗಾಗಿ ಅಧಿಕಾರಿಗಳು ಪರಸ್ಪರ ಸಮನ್ವಯ, ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಶೀಘ್ರವೇ ರಸ್ತೆ ಅಗಲೀಕರಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮೊದಲು ಶಾಸಕರು, ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಇಂಡಿ ಪಂಪ್, ನ್ಯೂ ಇಂಗ್ಲಿಷ್ ಸ್ಕೂಲ್ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಅಗತ್ಯ ಸಲಹೆ-ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಆರ್. ಸ್ನೇಹಲ್, ಎಡಿಸಿ ಸಿ.ಡಿ. ಗೀತಾ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಡಿಸಿಪಿಗಳಾದ ಸಿ.ಆರ್. ರವೀಶ, ಎನ್,ಎಸ್. ಶ್ರುತಿ, ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಎಇಇ ವಿಜಯಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.