ಜನರ ಪಾಲ್ಗೊಳ್ಳುವಿಕೆ ಕೊರತೆಯಿಂದ ಹಬ್ಬಗಳು ಸಂಭ್ರಮ ಕಳೆದುಕೊಳ್ಳುತ್ತಿವೆ-ಕಿತ್ತೂರ

| Published : Mar 30 2024, 12:55 AM IST

ಜನರ ಪಾಲ್ಗೊಳ್ಳುವಿಕೆ ಕೊರತೆಯಿಂದ ಹಬ್ಬಗಳು ಸಂಭ್ರಮ ಕಳೆದುಕೊಳ್ಳುತ್ತಿವೆ-ಕಿತ್ತೂರ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ದಶಕಗಳಾಚೆಯಿಂದಲೂ ಹೋಳಿಹಬ್ಬ ನಡೆದುಬರುತ್ತಿದ್ದು, ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಕೊರತೆಯಿಂದಾಗಿ ಹಬ್ಬಗಳು ಸಂಭ್ರಮವನ್ನು ಕಳೆದುಕೊಳ್ಳುತ್ತಿವೆ ಎಂದು ಹಿರಿಯ ಕಲಾವಿದ, ಮಾಜಿ ಪುರಸಭಾಧ್ಯಕ್ಷ ಯಲ್ಲಪ್ಪ ಕಿತ್ತೂರ ಆತಂಕ ವ್ಯಕ್ತಪಡಿಸಿದರು.

ಹಾನಗಲ್ಲ: ಹಲವು ದಶಕಗಳಾಚೆಯಿಂದಲೂ ಹೋಳಿಹಬ್ಬ ನಡೆದುಬರುತ್ತಿದ್ದು, ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಕೊರತೆಯಿಂದಾಗಿ ಹಬ್ಬಗಳು ಸಂಭ್ರಮವನ್ನು ಕಳೆದುಕೊಳ್ಳುತ್ತಿವೆ ಎಂದು ಹಿರಿಯ ಕಲಾವಿದ, ಮಾಜಿ ಪುರಸಭಾಧ್ಯಕ್ಷ ಯಲ್ಲಪ್ಪ ಕಿತ್ತೂರ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ತಾರಕೇಶ್ವರ ದೇವಸ್ಥಾನದ ಎದುರಿನಲ್ಲಿ ಕದಂಬ ಯುವಶಕ್ತಿ ಆಯೋಜಿಸಿದ್ದ ರಂಗಿನ ರಾತ್ರಿಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎರಡು ದಶಕಗಳ ಹಿಂದೆ ಹೋಳಿಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಆಕರ್ಷಿಸುವಂತಿತ್ತು. ಇತ್ತೀಚೆಗೆ ಹೋಳಿಹಬ್ಬ, ಗಣಪತಿ ಹಬ್ಬ ಎಲ್ಲದಕ್ಕೂ ಡಿಜೆ ಸೌಂಡ್ ಇಲ್ಲದಿದ್ದರೆ ಯುವ ಸಮುದಾಯ ಪಾಲ್ಗೊಳ್ಳದಂತಾಗಿದೆ. ನಮ್ಮ ಸಂಸ್ಕೃತಿ ಬಿಟ್ಟು ವಿದೇಶಿ ಸಂಸ್ಕೃತಿಗೆ ಬೆನ್ನು ಬೀಳುವುದು ಬೇಡ. ಹಳೆಯ ಸಂಪ್ರದಾಯಗಳ ಉಳಿವಿಗೆ, ಸಾಂಸ್ಕೃತಿಕ ಚಟುವಟಿಕೆ, ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡಬೇಕು. ಹೋಳಿಹಬ್ಬ ಸ್ವೇಚ್ಛಾಚಾರಕ್ಕೆ ಆಚರಣೆ ಮಾಡುವಂಥದ್ದಲ್ಲ. ವೇಷ-ಭೂಷಣ, ನಾಟಕಗಳು, ನೃತ್ಯಗಳ ಮೂಲಕ ನಮ್ಮಲ್ಲಿರುವ ಅಭಿಲಾಷೆಗಳನ್ನು ಹೊರಹಾಕುವ ಮೂಲಕ ಸಂಭ್ರಮಿಸುವಂತಾಗಬೇಕು ಎಂದು ಸಲಹೆ ಮಾಡಿದರು.ಕುರಿ-ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಟಿವಿಗಳಲ್ಲಿ ಹಿರಿಯರು-ಕಿರಿಯರು ಎಲ್ಲರೂ ಮುಳುಗುತ್ತಿದ್ದಾರೆ. ಗ್ರಾಮೀಣ ಸಾಂಸ್ಕೃತಿಕ ಚಟುವಟಿಕೆಗಳು ನಶಿಸುತ್ತಿವೆ. ಹೋಳಿಹಬ್ಬ ಸಾಮರಸ್ಯದ ಹಬ್ಬವಾಗಬೇಕು. ಜಾತಿ, ಬಡವ, ಬಲ್ಲಿದನೆಂಬ ವಿಷಯಗಳಿಂದ ಹೊರಬಂದು ಒಗ್ಗಟ್ಟು ಪ್ರದರ್ಶಿಸುವ ಸಂಭ್ರಮಾಚರಣೆಯಾಗಬೇಕು. ಪರಿಸರಕ್ಕೆ ಧಕ್ಕೆಯಾಗದಂತೆ ನಮ್ಮ ಆಚರಣೆಗಳು ನಡೆಯಬೇಕು ಎಂದು ಕರೆ ನೀಡಿದರು. ಪ್ರಾಸ್ತಾವಿಕ ಮಾತನಾಡಿದ ಗಿರೀಶ ದೇಶಪಾಂಡೆ, ನಮ್ಮ ಎಲ್ಲ ಹಬ್ಬಗಳಿಗೂ ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆಗಳಿವೆ. ನಮ್ಮಲ್ಲಿರುವ ಕಾಮ, ಕ್ರೋಧಗಳನ್ನು ಕಾಮನಹಬ್ಬದಲ್ಲಿ ಸಾಂಕೇತಿಕವಾಗಿ ಸುಡುವ ಮೂಲಕ ಸಮಾಜಕ್ಕೆ ಸಂದೇಶ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಹೋಳಿಹಬ್ಬ ದುಶ್ಚಟಗಳ ಆಚರಣೆಗೆ ಬಳಕೆಯಾಗುತ್ತಿರುವುದು ಖೇದಕರ. ಕದಂಬ ಯುವಶಕ್ತಿ ಇದೆಲ್ಲದರ ಬದಲಾವಣೆಗೆ ಕಳೆದ ೨೫ ವರ್ಷಗಳಿಂದ ಸಾಂಸ್ಕೃತಿಕ ರೂಪ ನೀಡಿ ಪರಿವರ್ತನೆಗೆ ಪ್ರಯತ್ನಿಸುತ್ತಿದೆ. ಸಾರ್ವಜನಿಕರ ಸಹಕಾರದಿಂದ ಜೀವಂತ ರತಿ-ಮನ್ಮಥ, ಸ್ತಬ್ಧಚಿತ್ರಗಳು, ನೃತ್ಯ ಪ್ರದರ್ಶನ, ನಗೆಹಬ್ಬಗಳಂಥ ಆಚರಣೆ ಮೂಲಕ ಬದಲಾವಣೆಗೆ ಮುನ್ನುಡಿ ಬರೆದಿದೆ ಎಂದರು. ಕದಂಬ ಯುವಶಕ್ತಿ ಅಧ್ಯಕ್ಷ ಗುರುರಾಜ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯ ವರ್ತಕರಾದ ಇಷ್ಟಲಿಂಗ ಸಾಲವಟಿಗಿ, ಎಸ್.ತೀರ್ಥರಾಜ್, ನರಪತಸಿಂಗ್ ರಾಜಪೂರ ಅವರುಗಳನ್ನು ಸನ್ಮಾನಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ರವಿಚಂದ್ರ ಪುರೋಹಿತ, ಸಮೀರ ಬಂಕಾಪುರ, ಪರಶುರಾಮ ಖಂಡೂನವರ, ದೀಪಕ ಕಲಾಲ, ಸುರೇಶ ನಾಗಣ್ಣನವರ, ಕೃಷ್ಣಾ ಪೂಜಾರ, ಪ್ರವೀಣ ಸುಲಾಖೆ, ರಾಕೇಶ ಕಬ್ಬೂರ, ಪ್ರಕಾಶ ದಾಮೋದರ, ಸಂತೋಷ ಸುಣಗಾರ, ಗುರು ಕಲಾಲ, ದಶರಥ ಬಾಬರ ಇತರರು ಪಾಲ್ಗೊಂಡಿದ್ದರು.