ದುರ್ಗಾಪರಮೇಶ್ವರಿ ದೇವಿ ಮಹಿಮೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ

| Published : Jan 15 2025, 12:46 AM IST

ದುರ್ಗಾಪರಮೇಶ್ವರಿ ದೇವಿ ಮಹಿಮೆ ಅಪಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಯಾವುದೇ ಸಹಾಯವನ್ನು ಯಾಚಿಸದೇ ಅದ್ಧೂರಿಯಾಗಿ ಜಾತ್ರೆ ನಡೆಸುತ್ತಿರುವ ಮಾರಿಜಾತ್ರಾ ಮಹೋತ್ಸವ ಸಮಿತಿಯ ಕಾರ್ಯ ಗಮನಾರ್ಹ.

ಭಟ್ಕಳ: ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಿಯ ಮೇಲೆ ಭಕ್ತರು ಅಪಾರ ಭಕ್ತಿ, ನಂಬಿಕೆ ಇಟ್ಟುಕೊಂಡಿದ್ದು, ದೇವಿ ಭಕ್ತರ ಬೇಡಿಕೆಯನ್ನು ಈಡೇರಿಸುತ್ತಿದೆ. ಹೀಗಾಗಿ ದೇವಿಯ ಮಹಿಮೆ ರಾಜ್ಯ, ದೇಶ, ವಿದೇಶದಲ್ಲೂ ಪ್ರಸಿದ್ಧಿ ಪಡೆಯುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.

ಮಂಗಳವಾರ ಅಳ್ವೆಕೋಡಿಯಲ್ಲಿ ಮಾರಿಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪ್ರಥಮ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಿ ಬೇಡಿದ್ದನ್ನು ಕೊಡುವ ತಾಯಿಯಾಗಿದ್ದಾಳೆ. ಇದರ ಅನುಭವ ಖುದ್ದು ನನಗೇ ಆಗಿದೆ ಎಂದ ಅವರು, ಅಳ್ವೆಕೋಡಿ ದೇವಸ್ಥಾನದ ವತಿಯಿಂದ ಸಮಾಜಮುಖಿ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ರಾಜ್ಯ ಸರ್ಕಾರದ ಯಾವುದೇ ಸಹಾಯವನ್ನು ಯಾಚಿಸದೇ ಅದ್ಧೂರಿಯಾಗಿ ಜಾತ್ರೆ ನಡೆಸುತ್ತಿರುವ ಮಾರಿಜಾತ್ರಾ ಮಹೋತ್ಸವ ಸಮಿತಿಯ ಕಾರ್ಯ ಗಮನಾರ್ಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಎಂ. ಮೊಗೇರ ವಹಿಸಿದ್ದರು. ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಜಿಎಸ್‌ಬಿ ಸಮಾಜದ ಅಧ್ಯಕ್ಷ ಅಶೋಕ ಪೈ, ಶ್ರೀ ಅಳ್ವೇಕೋಡಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಮುಂತಾದವರು ಮಾತನಾಡಿದರು. ಅರ್ಚಕ ವೇ.ಮೂ. ಗೋವರ್ಧನ ಪುರಾಣಿ, ಚಿತ್ರಾಪುರ ಮಠದ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ವಿಠಲ ದೈಮನೆ, ಶ್ರೀ ದುರ್ಗಾ ಮೊಗೇರ ಸೌಹಾರ್ಧ ಸಹಕಾರಿಯ ಅಧ್ಯಕ್ಷ ಯಾದವ ವಿ. ಮೊಗೇರ, ಗುತ್ತಿಗೆದಾರ ಬಾಬು ಮೊಗೇರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತ, ಚಂದ್ರಕಾಂತ ಮೊಗೇರ ಮುಂತಾದವರಿದ್ದರು.

ಶ್ರೀ ಅಳ್ವೇಕೋಡಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು. ಚಂದ್ರಕಾಂತ ಮೊಗೇರ ಪ್ರಾರ್ಥಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು.ಗೋರೆಯಲ್ಲಿ ವಿವೇಕಾನಂದ ಜಯಂತ್ಯುತ್ಸವ

ಕುಮಟಾ: ಇಡೀ ವಿಶ್ವವೇ ಭಾರತೀಯ ಶಿಕ್ಷಣದತ್ತ ಮುಖ ಮಾಡುವಂಥ ಶಿಕ್ಷಣ ಭಾರತದೆಲ್ಲೆಡೆ ದೊರೆಯುವಂತಾಗಲಿ ಎಂದು ಅಖಿಲ ಭಾರತ ಪ್ರಜ್ಞಾ ಪ್ರವಾಜ ಪ್ರಮುಖ ರಘುನಂದನ್ ತಿಳಿಸಿದರು.

ತಾಲೂಕಿನ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣ ಭಾರತಿ ಸಹಯೋಗದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ೧೬೨ನೇ ಜಯಂತ್ಯುತ್ಸವ ಉದ್ಘಾಟಿಸಿ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರ ಗುರು- ಶಿಷ್ಯ ಸಂಬಂಧ, ವಿಶ್ವ ಭ್ರಾತೃತ್ವ, ಬ್ರಹ್ಮಚರ್ಯ ಪಾಲನೆ, ಅನುಷ್ಠಾನ, ವೇದಾಂತ ಕುರಿತು ವಿಶೇಷ ಉಪನ್ಯಾಸ ಮಾಡಿದರು.

ರಾಷ್ಟ್ರೀಯ ಮಲ್ಲಕಂಬ ಪಟು ಅಮೋಘ ಸಾಂಭಯ್ಯ ಹಿರೇಮಠ ಮಾತನಾಡಿ, ಸ್ವಾಮಿ ವಿವೇಕಾನಂದರ ದೇಶಭಕ್ತಿಯ ಜತೆಗೆ ಭಗತ್ ಸಿಂಗ್, ಕುದಿರಾಮ್ ಭೋಸ್, ವೀರ ಸಾವರಕರ ಅವರಂಥ ಮಹಾನ್ ದೇಶಭಕ್ತರ ಜೀವನಾದರ್ಶಗಳನ್ನೂ ಅಳವಡಿಸಿಕೊಳ್ಳಬೇಕು. ಉನ್ನತವಾಗಿ ಆಲೋಚಿಸಿ, ಆದರ್ಶವಾಗಿ ಬದುಕಿ ಎಂದರು.

ಕೆನರಾ ಎಕ್ಸಲೆನ್ಸ್ ಕಾಲೇಜಿನ ಸಂಸ್ಥಾಪಕ ಡಾ. ಜಿ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೋತ್ಥಾನ ಪರಿಷತ್ ಮತ್ತು ಪ್ರಶಿಕ್ಷಣ ಭಾರತಿ ವತಿಯಿಂದ ನಡೆಸಿದ ಚರ್ಚೆ, ಆಶುಭಾಷಣ, ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾಚಾರ್ಯ ರಾಮ ಭಟ್ಟ ಸ್ವಾಗತಿಸಿದರು. ರಾಷ್ಟ್ರೋತ್ಥಾನ ಪರಿಷತ್ ಜಿಲ್ಲಾ ಸಂಯೋಜಕ ಅಭಿಷೇಕ ಜಿ.ಒ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರನಾರಾಯಣ ಉಪಾಧ್ಯಾಯ ವಂದಿಸಿದರು. ಪೂಜಾ ಭಟ್ಟ ನಿರೂಪಿಸಿದರು.