ಸಾರಾಂಶ
ಕನ್ನಡಪ್ರಭವಾರ್ತೆ ಮಂಡ್ಯ
ಮೈಷುಗರ್‌ನಲ್ಲಿ ಪ್ರಸಕ್ತ ಸಾಲಿನ ಕಬ್ಬುವ ಅರೆಯುವ ಕಾರ್ಯಕ್ಕೆ ಶೀಘ್ರ ಚಾಲನೆ ದೊರೆಯಲಿದೆ. ಜೂ.30ರಂದು ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂಜಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಗಳು ಭಾಗವಹಿಸಲಿದ್ದಾರೆ. ಜುಲೈ ಮಧ್ಯದಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ 2.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಈಗಾಗಲೇ 1.90 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಈ ಬಾರಿ ಕಬ್ಬಿನ ಕೊರತೆ ಎದುರಾಗುವ ಸಾಧ್ಯತೆಗಳಿದ್ದು, ಹೊರ ಜಿಲ್ಲೆಯಿಂದ ಕಬ್ಬು ತಂದು ನುರಿಸಲು ಚಿಂತನೆ ನಡೆಸಲಾಗಿದೆ ಎಂದರು.ಮೈಷುಗರ್‌ನಲ್ಲಿ ಸಹ ವಿದ್ಯುತ್ ಘಟಕವನ್ನೂ ಆರಂಭಿಸಿ ಕಾರ್ಖಾನೆಗೆ ಅಗತ್ಯವಿರುವ ವಿದ್ಯುತ್‌ನ್ನು ಇಟ್ಟುಕೊಂಡು ಉಳಿದಿದ್ದನ್ನು ಸೆಸ್ಕ್‌ಗೆ ಮಾರಾಟ ಮಾಡಲಾಗುವುದು. ಕಳೆದ ಬಾರಿ ಅಂತಿಮ ಹಂತದಲ್ಲಿ ಸ್ವಲ್ಪ ಪ್ರಮಾಣದ ವಿದ್ಯುತ್‌ನ್ನು ಮಾರಾಟ ಮಾಡಲಾಗಿದೆ ಎಂದರು.
ಕಳೆದ ಬಾರಿ ಮಳೆ ಬಾರದೇ ಕಬ್ಬಿನ ಕೊರತೆ ಉಂಟಾಗಿತ್ತು. ಆದರೂ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಕಬ್ಬು ಸರಬರಾಜು ಮಾಡಿದ ಎಲ್ಲ ರೈತರಿಗೂ ಸಂಪೂರ್ಣ ಹಣವನ್ನು ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 3150 ರು. ಎಫ್.ಆರ್.ಪಿ. ನಿಗದಿ ಮಾಡಲಾಗಿದೆ. ಟನ್ ಕಬ್ಬಿಗೆ ಸರ್ಕಾರ ನಿಗಪಡಿಸಿರುವ ದರವನ್ನು ನೀಡಲಾಗುವುದು. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ 10 ದಿನಗಳೊಳಗೆ ಹಣ ಪಾವತಿಸಲಾಗುವುದು ಎಂದರು.ಕಬ್ಬಿನ ಕೊರತೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಲೆಮನೆ ಮಾಲೀಕರ ಸಭೆ ಕರೆಯಲು ನಿರ್ಧರಿಸಲಾಗಿದೆ. ಪರವಾನಗಿ ಇರುವ ಆಲೆಮನೆಗಳು ಮಾತ್ರ ಬೆಲ್ಲ ಉತ್ಪಾದನೆ ಮಾಡಬೇಕು. ಉಳಿದವರು ಮಾಡಬಾರದು ಎಂದು ಮನವಿ ಮಾಡಲು ಚಿಂತನೆ ನಡೆಸಲಾಗಿದೆ. ಮೈಷುಗರ್ ಉಳಿವಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಮೈಷುಗರ್ ವ್ಯಾಪ್ತಿಯಲ್ಲಿ ಇತರೆ ಖಾಸಗಿ ಕಾರ್ಖಾನೆಗಳು ಕಬ್ಬು ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಇದನ್ನು ತಡೆಯಲು ಈಗಾಗಲೇ ಜಾಗೃತ ದಳ ರಚಿಸಲಾಗಿದೆ. ಕಾನೂನು ಬಾಹಿರ ಕೃತ್ಯಗಳು ಕಂಡುಬಂದಲ್ಲಿ ರವಾನಗಿ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಉಮೇಶ್, ದೇಶಹಳ್ಳಿ ಮೋಹನ್‌ಕುಮಾರ್, ಚಂದ್ರಶೇಖರ್ ಇದ್ದರು.