ಸಾರಾಂಶ
ಹಿರೇಕೆರೂರು: ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುವ ಜತೆಗೆ ಚೈತನ್ಯಶೀಲತೆ ಬೆಳೆಸಿಕೊಳ್ಳಬಹುದು ಎಂದು ಹಾವೇರಿಯ ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ವೈದ್ಯಾಧಿಕಾರಿ ಡಾ|ಎಲ್.ಎಲ್. ರಾಠೋಡ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಸರ್ಕಾರಿ ರಕ್ತ ಭಂಡಾರ ಹಾವೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆರೋಗ್ಯವಂತ ಪುರುಷರು ವರ್ಷಕ್ಕೆ ನಾಲ್ಕು ಬಾರಿ ಹಾಗೂ ಮಹಿಳೆಯರು ಮೂರು ಬಾರಿ ರಕ್ತದಾನ ಮಾಡಬಹುದು. ಅಪಘಾತ, ಹೆರಿಗೆ, ರಕ್ತದ ಕೊರತೆ ಇದ್ದವರಿಗೆ ರಕ್ತದಾನದಿಂದ ಅನುಕೂಲವಾಗುತ್ತದೆ. ಹಾಗೆಯೇ ಡೆಂಘೀ ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ರಕ್ತದ ಕೊರತೆ ಎದುರಾಗಿದ್ದರಿಂದ ಯುವಜನತೆ ರಕ್ತದಾನಕ್ಕೆ ಮುಂದಾಗಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎಸ್.ಪಿ. ಗೌಡರ, ಆರೋಗ್ಯವಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಸೇವಾ ಮನೋಭಾವ ತೊರೆಯಬೇಕು ಎಂದರು. ವಿದ್ಯಾರ್ಥಿಗಳು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಕಾಲೇಜಿನ ಘನತೆ ಹೆಚ್ಚಿಸಿರುವುದು ಸಂತಸ ನೀಡಿದೆ ಎಂದರು.ಎನ್ನೆಸ್ಸೆಸ್ ಹಾಗೂ ರೆಡ್ ಕ್ರಾಸ್ ಸಂಚಾಲಕ ಡಿ. ಹರೀಶ್ ಪ್ರಾಸ್ತಾವಿಕ ಮಾತನಾಡಿದರು.ಹಾವೇರಿ ರಕ್ತ ಭಂಡಾರದ ತಾಂತ್ರಿಕ ಅಧಿಕಾರಿ ಬಸವರಾಜ್ ಕಮತದ, ಹಿರೇಕೆರೂರು ಆಸ್ಪತ್ರೆಯ ತಾಂತ್ರಿಕ ಅಧಿಕಾರಿ ಶ್ರೀನಿವಾಸ್ ಸುರಹೊನ್ನೆ, ಐಕ್ಯೂಎಸಿ ಸಂಚಾಲಕ ನವೀನ ಎಂ., ಎಂ.ಬಿ. ಬದನಿಕಾಯಿ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಉಪನ್ಯಾಸಕರಾದ ಶ್ರೀನಿವಾಸ ನಲವಾಗಿಲ ಸ್ವಾಗತಿಸಿದರು. ಡಾ. ಕಾಂತೇಶರೆಡ್ಡಿ ಗೋಡಿಹಾಳ ನಿರೂಪಿಸಿದರು. ಪಿ.ಐ. ಸಿದ್ದನಗೌಡ ವಂದಿಸಿದರು.