ಕಲಿಕಾ ಆಂದೋಲನಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿ

| Published : Oct 02 2024, 01:17 AM IST

ಸಾರಾಂಶ

ದಾಬಸ್‌ಪೇಟೆ: ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಕಲಿಕಾ ಉತ್ಸಾಹ ಹೆಚ್ಚಳವಾಗಿ ಬೌದ್ಧಿಕ ಮಟ್ಟ ವೃದ್ಧಿಯಾಗಲು ನೆರವಾಗುತ್ತದೆ ಎಂದು ಕಳಲುಘಟ್ಟ ಗ್ರಾಪಂ ಅಧ್ಯಕ್ಷೆ ಸೌಮ್ಯ ಅಭಿಪ್ರಾಯಪಟ್ಟರು.

ದಾಬಸ್‌ಪೇಟೆ: ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಕಲಿಕಾ ಉತ್ಸಾಹ ಹೆಚ್ಚಳವಾಗಿ ಬೌದ್ಧಿಕ ಮಟ್ಟ ವೃದ್ಧಿಯಾಗಲು ನೆರವಾಗುತ್ತದೆ ಎಂದು ಕಳಲುಘಟ್ಟ ಗ್ರಾಪಂ ಅಧ್ಯಕ್ಷೆ ಸೌಮ್ಯ ಅಭಿಪ್ರಾಯಪಟ್ಟರು.

ತ್ಯಾಮಗೊಂಡ್ಲು ಹೋಬಳಿಯ ಅಲಾನಾಯಕನಹಳ್ಳಿ ಶಾಲಾ ಆವರಣದಲ್ಲಿ ಕಳಲುಘಟ್ಟ ಗ್ರಾಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಾಕ್ಷರತಾ ಇಲಾಖೆ ಸಮುದಾಯ ಮತ್ತು ಅಕ್ಷರ ಫೌಂಡೇಷನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ. ತರಗತಿಗಳಲ್ಲಿ ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಬೋಧಿಸುವ ಕುರಿತು ಶಿಕ್ಷಕರಿಂದ ನಿರಂತರ ಪ್ರಯತ್ನಗಳು ನಡೆಯಬೇಕು. ಇಂತಹ ಕಲಿಕಾ ಆಂದೋಲನಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯೋಜನವಾಗಲಿದೆ ಎಂದರು.

ಗ್ರಾಪಂ ಪಿಡಿಒ ಗೀತಾಮಣಿ ಮಾತನಾಡಿ, ಮಕ್ಕಳಲ್ಲಿ ಗಣಿತ ವಿಷಯದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಸರ್ಕಾರ, ಸ್ಥಳೀಯ ಆಡಳಿತ, ಸರ್ಕಾರೇತರ ಸಂಘ- ಸಂಸ್ಥೆಗಳು ಜಂಟಿಯಾಗಿ ಗಣಿತ ಕಲಿಕಾ ಆಂದೋಲನ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಈ ಮೂಲಕ ವಿದ್ಯಾರ್ಥಿಗಳು ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯಲು ಪ್ರೇರೇಪಿಸಲಾಗುತ್ತಿದೆ ಎಂದರು.

ಎಸ್ ಡಿಎಂಸಿ ಅಧ್ಯಕ್ಷ ಅಂಜಿನಮೂರ್ತಿ ಮಾತನಾಡಿ, ಮಕ್ಕಳಲ್ಲಿ ಗಣಿತ ವಿಷಯದ ಬಗೆಗಿನ ಕಪೋಲ ಕಲ್ಪಿತ ಆತಂಕ ದೂರ ಮಾಡಬೇಕಾಗಿದೆ. ಎಲ್ಲಾ ವಿಷಯಗಳಂತೆ ಗಣಿತವು ಸಹ ಕಲಿಯಲು ಸುಲಭದ ವಿಷಯ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಈ ಪ್ರಯತ್ನ ತುಂಬಾ ಉತ್ತಮವಾಗಿದೆ ಎಂದರು.

ಗ್ರಾಪಂ ಪಂಚಾಯಿತಿಗೆ ಸೇರಿದ ಎಲ್ಲಾ ಹಳ್ಳಿಗಳಿಂದ ನಾಲ್ಕು, ಐದು ಮತ್ತು ಆರನೇ ತರಗತಿಯ 60 ವಿದ್ಯಾರ್ಥಿಗಳು ಗಣಿತ ಕಲಿಕಾ ಆಂದೋಲನ ಪರೀಕ್ಷೆಯಲ್ಲಿ ಭಾಗವಹಿಸಿದ್ದರು

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಲೋಕೇಶ್, ನರಸಿಂಹಮೂರ್ತಿ, ಹರೀಶ್, ಮುಖಂಡರಾದ ಉಮೇಶ್, ದಿನೇಶ್, ಬಿಆರ್ ಸಿ ನಂಜಮ್ಮ, ಸಿಆರ್‌ಪಿ ಸುಕನ್ಯಾ, ಶಿಕ್ಷಕರಾದ ರಾಜು, ಸಿದ್ದಗಂಗಯ್ಯ, ಇಂದೂಮತಿ ಮತ್ತಿತರರಿದ್ದರು.