ಸಾರಾಂಶ
ಐತಿಹಾಸಿಕ ಕಿತ್ತೂರು ವಿಜಯೋತ್ಸವಕ್ಕೆ ದ್ವಿಶತಕ ತುಂಬುತ್ತಿರುವ ಹಿನ್ನೆಲೆ ನಾಡಿನೆಲ್ಲೆಡೆ ಸಂಚರಿಸುವ ವೀರಮಾತೆ ಕಿತ್ತೂರು ಚನ್ನಮ್ಮಾಜಿಯ ವೀರಜ್ಯೋತಿಗೆ ಬುಧವಾರ ಬೆಂಗಳೂರಿನ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಐತಿಹಾಸಿಕ ಕಿತ್ತೂರು ವಿಜಯೋತ್ಸವಕ್ಕೆ ದ್ವಿಶತಕ ತುಂಬುತ್ತಿರುವ ಹಿನ್ನೆಲೆ ನಾಡಿನೆಲ್ಲೆಡೆ ಸಂಚರಿಸುವ ವೀರಮಾತೆ ಕಿತ್ತೂರು ಚನ್ನಮ್ಮಾಜಿಯ ವೀರಜ್ಯೋತಿಗೆ ಬುಧವಾರ ಬೆಂಗಳೂರಿನ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಕಂದಾಯ ಇಲಾಖೆಯ ಸಚಿವ ಕೃಷ್ಣಬೈರೇಗೌಡ, ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ವಿನಯ ಕುಲಕರ್ಣಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಸಚಿವರು ಭಾಗಿಯಾಗಲಿದ್ದಾರೆ. ರಾಜ್ಯ,ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಕಿತ್ತೂರು ರಾಣಿ ಚನ್ನಮ್ಮಾಜಿಯ ಅಭಿಮಾನಿಗಳು ಹಾಗೂ ಇತರರು ಭಾಗಿಯಾಗಲಿದ್ದಾರೆ.
ನಾಡಿನೆಲ್ಲಡೆಯೂ ಜ್ಯೋತಿ ಸಂಚರಿಸಿ ಅ.23ರಂದು ನಡೆಯುವ ಕಿತ್ತೂರು ಉತ್ಸವಕ್ಕೆ ಬೆಳಗ್ಗೆ 10ಕ್ಕೆ ಪಟ್ಟಣಕ್ಕೆ ತಲುಪಲಿದ್ದು, ವೀರಜ್ಯೋತಿಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭವ್ಯ ಸ್ವಾಗತ ದೊರೆಯಲಿದೆ. ನಾಡಿನೆಲ್ಲೆಡೆ ಸಂಚರಿಸುವ ಈ ಜ್ಯೋತಿಯ ವಾಹನವನ್ನು ಈಗಾಗಲೇ ಶೃಂಗರಿಸಲಾಗಿದ್ದು, ತೆರೆದ ವಾಹನದಲ್ಲಿ ಕೋಟೆಯಂತಿರುವ ಚಿತ್ರ ಬಿಡಿಸಲಾಗಿದೆ. ವಾಹನದಲ್ಲಿ ಯುದ್ಧಭೂಮಿಯಲ್ಲಿ ಕುದುರೆಯನ್ನೇರಿ ಸವಾರಿ ಮಾಡುತ್ತಿರುವ ತಾಯಿ ಚನ್ನಮ್ಮಾಜಿಯ ಪುತ್ಥಳಿ ಸ್ಥಾಪಿಸಲಾಗಿದ್ದು, ಈ ವಾಹನ ನೋಡುಗರ ಗಮನ ಸೇಳೆಯುವಂತಾಗಿದೆ.