ಕಾರಟಗಿ ಪುರಸಭೆ ಮೇಲ್ದರ್ಜೆಗೇರಿಸಲು ಯತ್ನ

| Published : Sep 29 2025, 01:05 AM IST

ಕಾರಟಗಿ ಪುರಸಭೆ ಮೇಲ್ದರ್ಜೆಗೇರಿಸಲು ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಮೊದಲ ಬಾರಿ ಸಚಿವನಾದ ಆನಂತರ ಗ್ರಾಪಂನಿಂದ ಕಾರಟಗಿ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದೆ

ಕಾರಟಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಪಟ್ಟಣ ಕಾರಟಗಿಯ ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಿ ನಗರಸಭೆಯನ್ನಾಗಿ ಮಾಡುವ ಮೂಲಕ ಮತ್ತಷ್ಟು ಅಭಿವೃದ್ಧಿಗೆ ನಾಂದಿ ಹಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಕೋಶ, ಕಾರಟಗಿ ಪುರಸಭೆ ಕಾರ್ಯಾಲಯ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಆಶ್ರಯದಲ್ಲಿ ಇಲ್ಲಿನ ಪದ್ಮಶ್ರೀ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಮೊದಲ ಬಾರಿ ಸಚಿವನಾದ ಆನಂತರ ಗ್ರಾಪಂನಿಂದ ಕಾರಟಗಿ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದೆ. ಪುರಸಭೆ ನೌಕರರ ಕಾಯಂಮಾತಿಗೂ ವಿಶೇಷ ಪ್ರಯತ್ನ ಮಾಡಿದ್ದೇನೆ. ನೇಮಕಾತಿಯಲ್ಲೂ ಈಗಾಗಲೆ ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ. ಶೀಘ್ರ ಈ ಕೆಲಸ ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜತೆಗೆ ಕಾರಟಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಬೇಕು ಎಂಬ ಜನರ ಬೇಡಿಕೆಯ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ತರುತ್ತೇನೆ. ಈ ಕುರಿತು ಪುರಸಭೆಯವರು ನಿರ್ಣಯ ಕೈಗೊಂಡು ವಾರದಲ್ಲಿಯೇ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ ಎಂದರು.

ನಗರಸಭೆಯಾದರೆ ಕಾರಟಗಿ ಜಿಲ್ಲೆಯ ಸದೃಢ ತಾಲೂಕು ಆಗುತ್ತದೆ. ಜನರ ಆದಾಯ ಹೆಚ್ಚಳಕ್ಕೂ ಪೂರಕವಾಗುತ್ತದೆ. ಊರಿನ ಅಭಿವೃದ್ಧಿಗಾಗಿ ಜನರು ಬದಲಾವಣೆಗೆ ಹೊಂದಿಕೊಳ್ಳಬೇಕು. ಕಾರಟಗಿ ತಾಲೂಕಿಗೆ ಹೊಸ ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದೇನೆ. ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇನೆ. ೧೫ ಎಕರೆ ಭೂಮಿಯಲ್ಲಿ ಎರಡೂವರೆ ಎಕರೆ ಭೂಮಿಯನ್ನು ಪೌರ ಕಾರ್ಮಿಕ ವಸತಿಗೆ ಮೀಸಲಿರಿಸುತ್ತೇನೆ ಎಂದು ಸಚಿವರು ಭರವಸೆ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ ಮಾತನಾಡಿ, ಪೌರಕಾರ್ಮಿಕರಿಗೆ ನಿವೇಶನ, ಪುರಸಭೆ ನೂತನ ಕಟ್ಟಡಕ್ಕಾಗಿ ಅನುದಾನ, ಜತೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಅನುದಾನವನ್ನು ಸರ್ಕಾರದಿಂದ ಕೊಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಸೇವಾ ನೌಕರ ಸಂಘದ ಅಧ್ಯಕ್ಷ ಸಣ್ಣ ಈರಪ್ಪ ಚೌಡ್ಕಿ ಮಾತನಾಡಿ, ಪೌರ ಕಾರ್ಮಿಕರ ಬೇಡಿಕೆ ಈಡೇರಿಸಬೇಕು ಎಂದು ಸಚಿವರಿಗೆ ಮನವಿ ನೀಡಿದರು.

ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೌರ ಕಾರ್ಮಿಕರ ಬಗ್ಗೆ ನಿವೃತ್ತ ಶಿಕ್ಷಕ ಗುರುಬಸಪ್ಪ ಪಟ್ಟಣಶೆಟ್ಟಿ ಉಪನ್ಯಾಸ ನೀಡಿದರು. ಇದೇ ವೇಳೆ ಡಿಎಸ್‌ಪಿ ಯೋಜನೆಯಡಿ ೧೨೨ ಹೊಲಿಗೆ ಯಂತ್ರಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಿಸಲಾಯಿತು. ಶಿಕ್ಷಕರ ಅಮರೇಶ ಮೈಲಾಪುರ ಕಾರ್ಯಕ್ರಮ ನಿರ್ವಹಿಸಿದರು.

ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯರಾದ ಹಿರೇಬಸಪ್ಪ ಸಜ್ಜನ, ಸೋಮಶೇಖರ್ ಬರ‍್ಗಿ, ದೊಡ್ಡಬಸವರಾಜ ಬೂದಿ, ಮಂಜುನಾಥ ಮೇಗೂರು, ರಾಮಣ್ಣ, ಫಕೀರಪ್ಪ ನಾಯಕ, ಆನಂದ ಮ್ಯಾಗಲಮನಿ, ಹನುಮಂತರೆಡ್ಡಿ, ಉದ್ಯಮಿ ಎನ್. ಶ್ರೀನಿವಾಸ, ಗ್ಯಾರಂಟಿ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಅರಳಿ ನಾಗರಾಜ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ರಾಜು ದೇವಿಕ್ಯಾಂಪ್, ಬಸವರಾಜ್ ಎತ್ತಿನಮನಿ, ನಾಗರಾಜ ಈಡಿಗೇರ್, ಶರಣಪ್ಪ ಪರಕಿ, ಮರಿಯಪ್ಪ ಸಾಲೋಣಿ, ಧನಂಜಯ ಎಲಿಗಾರ್, ಶಕುಂತಲಾ, ರೇಣುಕಮ್ಮ ನಾಯಕ ಇದ್ದರು.