ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ, ಬಿಂಡಿಗನವಿಲೆಯ ಶ್ರೀಚನ್ನಕೇಶವ ಗರುಡ ದೇವಾಲಯ, ಬೆಳ್ಳೂರಿನ ಆದಿಮಾದವರಾಯಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಗ್ರಾಮಗಳ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ವೈಕುಂಠ ಏಕಾದಶಿ ಪ್ರಯುಕ್ತ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ, ಬಿಂಡಿಗನವಿಲೆಯ ಶ್ರೀಚನ್ನಕೇಶವ ಗರುಡ ದೇವಾಲಯ, ಬೆಳ್ಳೂರಿನ ಆದಿಮಾದವರಾಯಸ್ವಾಮಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ವಿಷ್ಣು ದೇವಾಲಯಗಳಲ್ಲಿ ಮಂಗಳವಾರ ನಡೆದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆದುಕೊಂಡರು.

ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ 5 ಗಂಟೆಗೆ ದೇವಾಲಯದ ಪ್ರಧಾನ ಅರ್ಚಕ ತಿರುನಾರಾಯಣ ಅಯ್ಯಂಗಾರ್, ಕೇಶವ ಅಯ್ಯಂಗಾರ್ ನೇತೃತ್ವದಲ್ಲಿ ಶಾಲಿಮಲೈಪೂಜೆಯೊಂದಿಗೆ ಪಂಚರತ್ರಾಗಮನದಲ್ಲಿ ಸೌಮ್ಯಕೇಶವನಿಗೆ ಅಭಿಷೇಕ ಮಾಡಿ ತೋಮಾಲೆ ಪೂಜೆ ನೆರವೇರಿಸಲಾಯಿತು. ಬಳಿಕ ಸರ್ವಾಲಂಕೃತಗೊಂಡಿದ್ದ ಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.

ಬೆಳಿಗ್ಗೆಯಿಂದ ಸಂಜೆವರೆಗೂ ಸರತಿ ಸಾಲಿನಲ್ಲಿ ಬಂದ ಸಹಸ್ರಾರು ಭಕ್ತರು ವೈಕುಂಠಧ್ವಾರದ ಮೂಲಕ ದೇವರ ದರ್ಶನ ಪಡೆದು ತಮ್ಮ ಭಕ್ತಿಭಾವ ಸಮರ್ಪಿಸಿದರು. ದೇವರ ದರ್ಶನ ಪಡೆದ ಎಲ್ಲ ಭಕ್ತರಿಗೆ ಪ್ರಸಾದದ ರೂಪದಲ್ಲಿ ಲಡ್ಡು ಮತ್ತು ಪುಳಿಯೋಗರೆ ವಿತರಿಸಲಾಯಿತು. ದೇವಾಲಯದ ಹೊರಾಂಗಣ ಮತ್ತು ಒಳ ಪ್ರಾಂಗಣವನ್ನು ವಿದ್ಯುತ್ ದೀಪ ಮತ್ತು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಶ್ರೀರಾಮಾನುಜರ ಸನ್ನಿಧಿಯಲ್ಲಿ ನಾದಸ್ವಾರ ಮತ್ತು ಪಟ್ಟಣದ ವಾಸವಿ ಯುವತಿ ಮಂಡಳಿ ವತಿಯಿಂದ ತಿರುಪಾವೈಪಠಣ ಆಯೋಜಿಸಲಾಗಿತ್ತು.

ಪಟ್ಟಣದ ನ್ಯಾಯಾಲಯದ ನ್ಯಾಯಾಧೀಶರು, ಮಾಜಿ ಶಾಸಕ ಸುರೇಶ್‌ಗೌಡ ದಂಪತಿ, ಡಿವೈಎಸ್‌ಪಿ ಬಿ.ಚಲುವರಾಜು ಸೇರಿದಂತೆ ನೆರೆಯ ತಮಿಳುನಾಡು, ಆಂದ್ರಪ್ರದೇಶ ರಾಜ್ಯದ ಅನೇಕ ಭಕ್ತರು ಪಾಲ್ಗೊಂಡರು.

ತಾಲೂಕಿನ ಬಿಂಡಿಗನವಿಲೆಯ ಚನ್ನಕೇಶವ ಗರುಡ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ವೇದ ಪಾರಾಯಣ ಬಹಳ ವಿಜೃಂಭಣೆಯಿಂದ ನೆರವೇರಿತು. ವೈಕುಂಠದ್ವಾರದ ಪೂಜೆ ಬಳಿಕ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬೆಂಗಳೂರಿನ ಭಕ್ತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದರೆ ಇಷ್ಟಾರ್ಥಗಳು ನೆರವೇರಿ ಒಳಿತಾಗುವುದೆಂಬ ನಂಬಿಕೆಯಿಂದ ತಾಲೂಕಿನ ಬಹುತೇಕ ವಿಷ್ಣು ದೇವಾಲಯಗಳಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಸಹಸ್ರಾರು ಮಂದಿ ಭಕ್ತರು ಕುಟುಂಬಸ್ಥರ ಜೊತೆಗೂಡಿ ಪಾಲ್ಗೊಂಡಿದ್ದರು.

ಪಟ್ಟಣದ ಶ್ರೀಯೋಗಾನರಸಿಂಹಸ್ವಾಮಿ, ಶ್ರೀಕೋದಂಡರಾಮಸ್ವಾಮಿ, ಶ್ರೀಕಲ್ಯಾಣ ವೆಂಕಟರಮಣಸ್ವಾಮಿ, ಕಂಚಿವರದರಾಯಸ್ವಾಮಿ. ಕೋಟೆಬೆಟ್ಟದ ಸಾಲಾದ್ರಿ ಶ್ರೀ ಕೋಟೆವೆಂಕಟರಮಣಸ್ವಾಮಿ, ಬೆಳ್ಳೂರಿನ ಆದಿಮಾದವರಾಯಸ್ವಾಮಿ, ಹದ್ದಿನಕಲ್ಲು ಹನುಮಂತರಾಯಸ್ವಾಮಿ, ಬೊಮ್ಮನಾಯಕನಹಳ್ಳಿಯ ವೆಂಕಟರಮಣಸ್ವಾಮಿ, ಗಿಡದ ಜಾತ್ರೆ ನಡೆಯುವ ಚಿಕ್ಕತಿರುಪತಿ ಶ್ರೀ ವೆಂಕಟರಮಣಸ್ವಾಮಿ, ದಂಡಿಗನಹಳ್ಳಿಯ ಶ್ರೀ ವರದರಾಯಸ್ವಾಮಿ ದೇವಸ್ಥಾನ ಸೇರಿದಂತೆ ನೂರಾರು ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಜರುಗಿದವು.