ಮಳವಳ್ಳಿ ಮೂಲಕ ಹಾದುಹೋಗಲಿರುವ ರಾಷ್ಟ್ರೀಯ ಹೆದ್ದಾರಿ-೨೦೯ ಕಾಮಗಾರಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳದಿದ್ದರೆ ಟೋಲ್ ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ಮೂಲಕ ಹಾದುಹೋಗಲಿರುವ ರಾಷ್ಟ್ರೀಯ ಹೆದ್ದಾರಿ-೨೦೯ ಕಾಮಗಾರಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳದಿದ್ದರೆ ಟೋಲ್ ಬಂದ್ ಮಾಡಿಸುವುದಾಗಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಎಚ್ಚರಿಕೆ ನೀಡಿದರು.

ಜಿಪಂ ಕಾವೇರಿ ಸಭಾಂಗಣದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಹಲಗೂರು-ಮುತ್ತತ್ತಿ ಅಂಡರ್‌ಪಾಸ್ ನಿರ್ಮಾಣ, ಮಳವಳ್ಳಿ ಪಟ್ಟಣದಲ್ಲಿ ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಪರಿವರ್ತಿಸುವುದು ಹಾಗೂ ಪ್ರವಾಸಿ ಮಂದಿರ ವೃತ್ತವನ್ನು ಅಭಿವೃದ್ಧಿ ಕಾಮಗಾರಿ ಆರಂಭಿಸದಿರುವುದೇಕೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಹೆದ್ದಾರಿ ನಿರ್ಮಾಣದ ಡಿಪಿಆರ್‌ನಲ್ಲಿ ಈ ಕಾಮಗಾರಿಗಳು ಸೇರ್ಪಡೆಯಾಗಿರಲಿಲ್ಲ. ಹೆಚ್ಚುವರಿ ಕಾಮಗಾರಿಗೆ ಅನುಮೋದನೆ ನೀಡಲು ಪತ್ರ ಬರೆದಿದ್ದೇವೆ. ಇನ್ನೂ ಉತ್ತರ ಬಂದಿಲ್ಲ ಎಂದು ಅಧಿಕಾರಿ ಹೇಳಿದಾಗ, ಅದು ನಿಮ್ಮ ಸಮಸ್ಯೆ. ನಮ್ಮದಲ್ಲ. ಈ ಮೂರು ಸ್ಥಳಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿ ಸಂಬಂಧ ಎಲ್ಲ ಸಮಸ್ಯೆ ಬಗೆಹರಿಸಿದ್ದೇವೆ. ಆದರೂ ಕಾಮಗಾರಿ ನಡೆಸುತ್ತಿಲ್ಲ. ಕಾಮಗಾರಿ ಆರಂಭವಾಗುವವರೆಗೆ ಟೋಲ್ ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.

ಹೆದ್ದಾರಿಯ ಜಂಕ್ಷನ್‌ಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ. ಇದರಿಂದ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುವವರಿಗೆ ಹಾಗೂ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ತೆರಳುವವರಿಗೆ ದಾರಿ ಹೇಗೆ ಕಾಣುತ್ತದೆ. ತಕ್ಷಣವೇ ಬೀದಿ ದೀಪಗಳನ್ನು ಅಳವಡಿಸುವಂತೆ ಸೂಚಿಸಿದರು.

ಅದೇ ರೀತಿ ರಾಷ್ಟ್ರೀಯ ಹೆದ್ದಾರಿ-೨೭೫ ಮೈಸೂರು-ಕುಶಾಲನಗರ ಹೆದ್ದಾರಿಯನ್ನು ಜಿಲ್ಲೆಯಿಂದ ಸಂಪರ್ಕಿಸುವ ೧೪.೨ ಕಿ.ಮೀ. ಉದ್ದದ ರಸ್ತೆಯಲ್ಲಿ ಸರ್ವೀಸ್ ರಸ್ತೆ ನೀಡದೆ ಕಾಮಗಾರಿ ನಡೆಸುತ್ತಿರುವುದೇಕೆ ಎಂದು ನರೇಂದ್ರಸ್ವಾಮಿ ಪ್ರಶ್ನಿಸಿದಾಗ, ಸಂಪರ್ಕ ರಸ್ತೆಗಳಿರುವ ಕಡೆ ಸರ್ವೀಸ್ ರಸ್ತೆ ನಿರ್ಮಿಸಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಉತ್ತರಿಸಿದರು. ಇದರಿಂದ ಕೆರಳಿದ ನರೇಂದ್ರಸ್ವಾಮಿ, ನೀವು ಹಣ ಸಂಪಾದಿಸುವುದಕ್ಕೆ ನಮ್ಮ ಭೂಮಿಯನ್ನು ಕೊಟ್ಟು ನಾವು ಬೇರೆ ರಸ್ತೆಗಳಲ್ಲಿ ಓಡಾಡಬೇಕೆ. ಇದಕ್ಕೆ ನಾವು ನಿಮಗೆ ಭೂಮಿಯನ್ನು ಏಕೆ ಕೊಡಬೇಕು. ಈ ವಿಷಯವಾಗಿ ಗಂಭೀರವಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.ಶಿಕ್ಷಕರು ಪಾಠ ಬಿಟ್ಟು ರಾಜಕೀಯ ಮಾಡ್ತಿದ್ದಾರೆ..!

ಕನ್ನಡಪ್ರಭ ವಾರ್ತೆ ಮಂಡ್ಯ

ಶಿಕ್ಷಕರಾದವರು ಶಾಲೆಗಳಲ್ಲಿ ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಶಿಕ್ಷಕರಿರುವ ಶಾಲೆಯ ಮಕ್ಕಳು ಉದ್ಧಾರ ಆಗೋಕೆ ಹೇಗೆ ಸಾಧ್ಯ. ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಡಿಡಿಪಿಐಗೆ ಸೂಚಿಸಿದರು.

ಶಿಕ್ಷಕರು ಶಾಲೆಗೆ ಹೋಗುತ್ತಿಲ್ಲ, ಪಾಠ ಮಾಡುತ್ತಿಲ್ಲವೆಂದರೆ ಏನ್ರೀ ಅರ್ಥ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೆಲ್ಲರೂ ಬಡವರು. ಅಂತಹ ಮಕ್ಕಳಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದಿಂದ ವಂಚಿಸುತ್ತಿದ್ದಾರೆ. ಅವರೆಲ್ಲರೂ ನಾಳೆ ಸಮಾಜಕ್ಕೆ ಮಾರಕರಾದರೆ ಅದಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಶಾಲೆಗೆ ಹೋಗದ, ಪಾಠ ಮಾಡದ ಶಿಕ್ಷಕರ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಿ. ನಾನು ನಿಮಗೆ ಬೆಂಬಲ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಆಗ ಜಿಪಂ ಸಿಇಒ ಕೆ.ಆರ್.ನಂದಿನಿ ಪ್ರತಿಕ್ರಿಯಿಸಿ, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸ್ಟೂಡೆಂಟ್ ಕಾರ್ನರ್ ಎಂಬ ಪುಸ್ತಕಗಳನ್ನು ಸರ್ಕಾರವೇ ಮುದ್ರಿಸಿ ಕೊಡುತ್ತಿದೆ. ಆ ಪುಸ್ತಕಗಳನ್ನು ಎಲ್ಲಾ ಶಾಲೆಗಳಿಗೂ ಹಂಚಿದರೆ ಮಕ್ಕಳಿಗೆ ಅನುಕೂಲವಾಗಲಿದೆ. ಅದಕ್ಕೆ ೧೦ ಲಕ್ಷ ರು.ವರೆಗೆ ಖರ್ಚಾಗಲಿದೆ ಎಂದಾಗ, ನರೇಂದ್ರಸ್ವಾಮಿ ಅವರು, ಆ ಹಣವನ್ನು ಪ್ರಾಯೋಜಕರಿಂದ, ಎಂಎಲ್‌ಸಿಗಳಿಂದ ನಾನು ದೊರಕಿಸಿಕೊಡುತ್ತೇನೆ. ಆ ಪುಸ್ತಕಗಳನ್ನು ಎಲ್ಲಾ ಶಾಲೆಯ ಮಕ್ಕಳಿಗೂ ಹಂಚುವುದಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಹಾಸ್ಟೆಲ್‌ಗಳಲ್ಲಿರುವ ಅವ್ಯವಸ್ಥೆ ಕೇಳೋರಿಲ್ಲ..!

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿರುವ ಅವ್ಯವಸ್ಥೆಯನ್ನು ಕೇಳೋರೇ ಇಲ್ಲದಂತಾಗಿದೆ. ಅಲ್ಲಿನ ಮಕ್ಕಳಿಗೆ ನಿಗದಿಪಡಿಸಿರುವಷ್ಟು ಆಹಾರ ಪದಾರ್ಥಗಳು ಪೂರೈಕೆಯಾಗಿವೆಯೇ, ಸಮವಸ್ತ್ರ, ಶೂಗಳನ್ನು ನೀಡಲಾಗಿದೆಯೇ ಎಂಬುದನ್ನು ಯಾರು ಪರಿಶೀಲಿಸುತ್ತಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಶ್ನಿಸಿದರು.

ಹಾಸ್ಟೆಲ್‌ಗಳಿಗೆ ಕಿರಾಣಿ ಅಂಗಡಿಗಳಿಂದ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿವೆ ಎಂಬ ಮಾಹಿತಿ ಇದೆ ಎಂದಾಗ, ಹಾಸ್ಟೆಲ್‌ಗಳ ಉಸ್ತುವಾರಿ ನೋಡುತ್ತಿರುವ ಶ್ರೀನಿವಾಸ್ ಮಾತನಾಡಿ, ಆಹಾರ ಪದಾರ್ಥಗಳು ಸಮರ್ಪಕವಾಗಿ ಪೂರೈಕೆಯಾಗುತ್ತಿವೆ. ಸಮವಸ್ತ್ರಗಳನ್ನು ಈಗ ಕೊಡಲಾಗುತ್ತಿದೆ. ಶೂಗಳನ್ನು ಕೊಡಬೇಕಿದೆ ಎಂದಾಗ, ಡಿಸೆಂಬರ್ ಅಂತ್ಯವಾಗುತ್ತಿದ್ದರೂ ಇದುವರೆಗೂ ಎರಡು ಜೊತೆ ಸಮವಸ್ತ್ರದ ಪೈಕಿ ಒಂದು ಜೊತೆ ಸಮವಸ್ತ್ರವನ್ನೂ ಕೊಟ್ಟಿಲ್ಲ, ಶೂಗಳನ್ನೂ ಕೊಟ್ಟಿಲ್ಲ. ಹೀಗಾದರೆ ಮಕ್ಕಳ ಪರಿಸ್ಥಿತಿ ಏನಾಗಬೇಕು. ಇದರ ಪರಿಸ್ಥಿತಿಯೇ ಹೀಗಿರುವಾಗ ಊಟವನ್ನು ಯಾವ ರೀತಿ ಕೊಡುತ್ತಿರುವರೊ ಎಂಬುದು ಅರ್ಥವಾಗುತ್ತದೆ ಎಂದು ಬೇಸರದಿಂದ ನುಡಿದರು.