ಆಸ್ತಿ ನೋಂದಣಿಗೆ ಇ-ಖಾತೆ ಕಡ್ಡಾಯ

| Published : Feb 22 2024, 01:46 AM IST / Updated: Feb 22 2024, 03:06 PM IST

Karnataka Assembly Session

ಸಾರಾಂಶ

ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿನ ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸೇವೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಗೊಳಿಸುವ ಉದ್ದೇಶ ಮತ್ತು ಪೇಪರ್‌ ಖಾತೆಯನ್ನು ತೆಗೆದು ಕಡ್ಡಾಯವಾಗಿ ಇ-ಆಸ್ತಿ ಕಡ್ಡಾಯಗೊಳಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು.

ಕನ್ನಡಪ್ರಭವಾರ್ತೆ ವಿಧಾನಸಭೆ

ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿನ ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸೇವೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಗೊಳಿಸುವ ಉದ್ದೇಶ ಮತ್ತು ಪೇಪರ್‌ ಖಾತೆಯನ್ನು ತೆಗೆದು ಕಡ್ಡಾಯವಾಗಿ ಇ-ಆಸ್ತಿ ಕಡ್ಡಾಯಗೊಳಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು. 

ಬುಧವಾರ ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧೇಯಕದ ಮಹತ್ವದ ಕುರಿತು ಮಾಹಿತಿ ನೀಡಿದ ಬಳಿಕ ಧ್ವನಿ ಮತದ ಮೂಲಕ ಅಂಗೀಕಾರ ನೀಡಲಾಯಿತು. 

ವಿಧೇಯಕ ಬಗ್ಗೆ ವಿವರಣೆ ನೀಡಿದ ಸಚಿವರು, ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. 

ಆಸ್ತಿ ಮಾರಾಟಗಾರರು ಹಾಗೂ ಖರೀದಿಸುವವರು ಇಬ್ಬರ ಉಪಸ್ಥಿತಿ ಇಲ್ಲದೆ ತಾವಿದ್ದ ಸ್ಥಳದಿಂದಲೇ ತಾಂತ್ರಿಕವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. 

ಅಲ್ಲದೇ, ಪೇಪರ್‌ ಖಾತೆಯನ್ನು ತೆಗೆದು ಕಡ್ಡಾಯವಾಗಿ ಇ-ಖಾತೆ ಕಡ್ಡಾಯಗೊಳಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. 

ಉಪ ನೋಂದಣಾಧಿಕಾರಿ ಕಚೇರಿಗೆ ಎರಡೂ ಕಡೆಯವರ ಉಪಸ್ಥಿತಿ ಅನಿವಾರ್ಯವಾಗಿದ್ದ ಕಾರಣ ಜನಸಂದಣಿ ಹೆಚ್ಚಾಗಿತ್ತು. ಎಲ್ಲರಿಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟಕರವಾಗಿತ್ತು.

 ಹೀಗಾಗಿ ಜನಸಾಮಾನ್ಯರು ಅನಗತ್ಯವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ತಾಂತ್ರಿಕ ನೋಂದಣಿಗಾಗಿ ಕ್ರಮ ಕೈಗೊಳ್ಳಲಾಗಿದೆ. 

ಕೆಐಎಡಿಬಿ, ಕರ್ನಾಟಕ ವಸತಿ ನಿಗಮ ಮಂಡಳಿ , ಕೊಳಚೆ ನಿರ್ಮೂಲನ ಮಂಡಳಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಂತಹ ನಂಬಿಕಾರ್ಹ ಮೂಲಗಳ ಸಹಾಯದಿಂದ ನಾಗರಿಕರು ತಾಂತ್ರಿಕವಾಗಿಯೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. 

ಈ ಹೊಸ ಮಾದರಿ ಈಗಾಗಲೇ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂ ಸಹ ಜನರಿಗೆ ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ ಎಂದರು. 

ನಗರ ಪ್ರದೇಶದಲ್ಲಿ ಪೇಪರ್‌ ಖಾತಾ ಮೂಲಕ ನೊಂದಣಿ ನಡೆಸಲಾಗುತ್ತಿದೆ. ಇದರಿಂದ ಅಕ್ರಮಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ವಿಧೇಯಕ ತರಲಾಗಿದೆ. 

ಇನ್ನು ಮುಂದೆ ಇ-ಆಸ್ತಿ ಮೂಲಕ ಖಾತೆ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ತಿಳಿಸಿದರು. ಇದೇ ವೇಳೆ ರಾಜಸ್ವ ಸೋರಿಕೆಯನ್ನು ತಡೆಯಲು ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು. 

ನೋಂದಣಿಗೆ ನಗದು ಪಾವತಿಯ ಬದಲು ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ ಎಂದು ಹೇಳಿದರು.